Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಚಿಕ್ಕಮಗಳೂರು: ಕಾಡುಕೋಣ ದಾಳಿಗೆ ಯುವಕ ಬಲಿ

ಚಿಕ್ಕಮಗಳೂರು: ಕಾಡುಕೋಣ ದಾಳಿಗೆ ಯುವಕ ಬಲಿ

0
96

ಚಿಕ್ಕಮಗಳೂರು: ಮಲೆನಾಡಿನ ಕಾಫಿನಾಡು ಎಂದೇ ಪ್ರಸಿದ್ಧಿಯಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ದಿನೇ ದಿನೇ ಗಂಭೀರವಾಗುತ್ತಿದ್ದು, ಮತ್ತೊಮ್ಮೆ ಕಾಡುಕೋಣ ದಾಳಿಗೆ ಯುವಕನೊಬ್ಬ ಬಲಿಯಾಗಿರುವ ದುರ್ಘಟನೆ ಸಂಭವಿಸಿದೆ. ಕಳಸ ತಾಲೂಕಿನ ಮೈದಾಡಿ ಗ್ರಾಮದ ಯಮಗೊಂಡ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದೆ.

ಮೃತ ಯುವಕನನ್ನು ಚೇತನ್ (30) ಎಂದು ಗುರುತಿಸಲಾಗಿದೆ. ಎಸ್ಟೇಟ್ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಕಸ್ಮಿಕವಾಗಿ ಎದುರಾದ ಕಾಡುಕೋಣ ದಾಳಿ ನಡೆಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಅವರನ್ನು ತಕ್ಷಣವೇ ಕಳಸ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗನನ್ನು ಕಳೆದುಕೊಂಡ ತಾಯಿಯ ರೋದನ ಮನಕಲುಕುವಂತಿತ್ತು. ಸ್ಥಳೀಯರ ಪ್ರಕಾರ, ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಕೆಲ ತಿಂಗಳಲ್ಲಿ ಹಲವಾರು ದಾಳಿಗಳು ನಡೆದಿವೆ. ಹಲವರು ಗಾಯಗೊಂಡಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳೀಯ ರೈತರು ಮತ್ತು ಕಾರ್ಮಿಕರು ಭಯದ ವಾತಾವರಣದಲ್ಲಿ ಬದುಕುವಂತಾಗಿದ್ದು, ರಾತ್ರಿ ಸಮಯದಲ್ಲಿ ಹೊರಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಡುಕೋಣಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾಡುಪ್ರಾಣಿಗಳ ಚಲನವಲನವನ್ನು ನಿಯಂತ್ರಿಸಲು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.