Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಮಟ್ಟನಹಳ್ಳಿ ಕೆರೆ ಏರಿ ಮೇಲೆ ರಕ್ತಪಾತ; ಪಾರ್ಟಿ ಮಾಡಲು ಹೋದವನ ತಲೆ ಮೇಲೆ ಕಲ್ಲು!

ಮಟ್ಟನಹಳ್ಳಿ ಕೆರೆ ಏರಿ ಮೇಲೆ ರಕ್ತಪಾತ; ಪಾರ್ಟಿ ಮಾಡಲು ಹೋದವನ ತಲೆ ಮೇಲೆ ಕಲ್ಲು!

0
76

ಬೆಂಗಳೂರು ಹೊರವಲಯದ ಸರ್ಜಾಪುರ ವ್ಯಾಪ್ತಿಯಲ್ಲಿ ಸ್ನೇಹದ ಹೆಸರಿಗೆ ಕಳಂಕ ತರುವಂತಹ ಭೀಕರ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಉಂಟಾದ ಸಣ್ಣ ಕಿರಿಕ್, ಅಂತಿಮವಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ತಮಿಳುನಾಡಿನ ಸಿಂಗಸದನಪಲ್ಲಿ ಗ್ರಾಮದ ನಿವಾಸಿಯಾಗಿದ್ದ 25 ವರ್ಷದ ಯುವಕ ಮೋಹನ್ ಈ ದುರ್ಘಟನೆಗೆ ಬಲಿಯಾದ ದುರ್ದೈವಿ.

ಘಟನೆಯ ವಿವರಕ್ಕೆ ಬರುವುದಾದರೆ, ಗುರುವಾರ ಸಂಜೆ ಮೋಹನ್ ತನ್ನ ಸ್ನೇಹಿತ ಮನೋಜ್ ಜೊತೆಗೆ ಪಾರ್ಟಿ ಮಾಡಲು ಸರ್ಜಾಪುರ ಸಮೀಪದ ಮಟ್ಟನಹಳ್ಳಿ ಕೆರೆ ಬಳಿ ಬಂದಿದ್ದ. ಕೆರೆಯ ಏರಿಯ ಮೇಲೆ ಇಬ್ಬರೂ ಕುಳಿತು ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಯಾವುದೋ ಹಳೆಯ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿದೆ. ನಶೆ ಏರುತ್ತಿದ್ದಂತೆ ಮಾತು ಮೀರಿ ಜಗಳ ವಿಕೋಪಕ್ಕೆ ಹೋಗಿದೆ. ಈ ಹಂತದಲ್ಲಿ ವಿವೇಚನೆ ಕಳೆದುಕೊಂಡ ಆರೋಪಿ ಮನೋಜ್, ಅಲ್ಲೇ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಕಲ್ಲನ್ನು ಎತ್ತಿ ಮೋಹನ್ ತಲೆಯ ಮೇಲೆ ಎಸೆದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮೋಹನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೃತ್ಯ ಎಸಗಿದ ಆರೋಪಿ ಮನೋಜ್‌ನನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕುಡಿತದ ಮತ್ತಿನಲ್ಲಿ ಕ್ಷಣಿಕ ಆವೇಶಕ್ಕೆ ಬಲಿಯಾಗಿ ಗೆಳೆಯನನ್ನೇ ಹತ್ಯೆ ಮಾಡಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸದ್ಯ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.