Home Advertisement
Home ಕ್ರೀಡೆ ಆರ್‌ಸಿಬಿ ‘ಟೈಮ್-ಪಾಸ್’ ತಂತ್ರಕ್ಕೆ ರವಿ ಶಾಸ್ತ್ರಿ ಫುಲ್ ಗರಂ: ಸಿಎಸ್‌ಕೆ ಬೌಲರ್‌ಗೆ ಜೈ ಎಂದ ಮಾಜಿ...

ಆರ್‌ಸಿಬಿ ‘ಟೈಮ್-ಪಾಸ್’ ತಂತ್ರಕ್ಕೆ ರವಿ ಶಾಸ್ತ್ರಿ ಫುಲ್ ಗರಂ: ಸಿಎಸ್‌ಕೆ ಬೌಲರ್‌ಗೆ ಜೈ ಎಂದ ಮಾಜಿ ಕೋಚ್!

0
136

ಐಪಿಎಲ್ 2026ರ ಟೂರ್ನಿ ಭರ್ಜರಿಯಾಗಿ ಸಾಗುತ್ತಿದ್ದು, ಮೈದಾನದ ಆಟದಷ್ಟೇ ಕಾಮೆಂಟರಿ ಬಾಕ್ಸ್‌ನ ಮಾತುಗಳು ಕೂಡ ಭಾರೀ ಸದ್ದು ಮಾಡುತ್ತಿವೆ. ಟಿ20 ಕ್ರಿಕೆಟ್‌ನಲ್ಲಿ ಆಟಗಾರರು ಪದೇ ಪದೇ ಸಮಯ ವ್ಯರ್ಥ ಮಾಡುವ ತಂತ್ರಗಳ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ವೃತ್ತಿಪರತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇತ್ತೀಚೆಗೆ ಸಿಎಸ್‌ಕೆ ಮತ್ತು ಕೆಕೆಆರ್ ನಡುವೆ ರೋಚಕ ಪಂದ್ಯ ನಡೆಯುತ್ತಿತ್ತು. ಈ ವೇಳೆ ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್ ಬೌಲಿಂಗ್ ಮಾಡುವಾಗ ಕಾಲಿನ ಸ್ನಾಯು ಸೆಳೆತಕ್ಕೆ ತುತ್ತಾದರು. ಆದ್ರೆ ಮೈದಾನದಲ್ಲೇ ಫಿಸಿಯೋವನ್ನು ಕರೆಸಿ ಪಂದ್ಯವನ್ನು ವಿಳಂಬ ಮಾಡಲಿಲ್ಲ. ಬದಲಾಗಿ ತಕ್ಷಣವೇ ಮೈದಾನದಿಂದ ಹೊರನಡೆದು ಗುರ್ಜಪ್ನೀತ್ ಸಿಂಗ್‌ಗೆ ಬೌಲಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು.

ಕಾಮೆಂಟರಿ ಮಾಡುತ್ತಿದ್ದ ರವಿ ಶಾಸ್ತ್ರಿ ಖಲೀಲ್ ಈ ನಡೆಯನ್ನು ಮೆಚ್ಚಿಕೊಂಡರು. “ಸುಮ್ಮನೆ 10 ನಿಮಿಷ ಮೈದಾನದಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಹೊರನಡೆದು ಚಿಕಿತ್ಸೆ ಪಡೆದಿದ್ದು ಅತ್ಯುತ್ತಮ ನಿರ್ಧಾರ” ಎಂದರು.

ಇದೇ ವೇಳೆ ಶಾಸ್ತ್ರಿ, ಆರ್‌ಸಿಬಿ ತಂಡದ ವಿರುದ್ಧ ಚಾಟಿ ಬೀಸಿದರು. ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ವೇಗಿ ರಾಸಿಖ್ ದಾರ್, ಒಂದೇ ಓವರ್‌ನಲ್ಲಿ ಪದೇ ಪದೇ ಫಿಸಿಯೋವನ್ನು ಮೈದಾನಕ್ಕೆ ಕರೆಸಿಕೊಂಡಿದ್ದರು. ಈ ಕಿರಿಕಿರಿಯಿಂದಾಗಿ ಆ ಟಿ20 ಪಂದ್ಯ ಮುಗಿಯಲು ಬರೋಬ್ಬರಿ ನಾಲ್ಕೂವರೆ ಗಂಟೆಗಳೇ ಬೇಕಾಯಿತು. ಆ ಸಂದರ್ಭದಲ್ಲಿ ದಂತಕಥೆ ಸುನಿಲ್ ಗವಾಸ್ಕರ್ ಕೂಡ, “ಗಾಯವಾಗಿದ್ದರೆ ಮೈದಾನದಿಂದ ಹೊರಹೋಗಿ, ಪದೇ ಪದೇ ಫಿಸಿಯೋ ಬರೋದು ಸರಿಯಲ್ಲ” ಎಂದು ಲೈವ್ ಕಾಮೆಂಟರಿಯಲ್ಲೇ ಕಿಡಿಕಾರಿದ್ದರು.

ಸಮಯ ವ್ಯರ್ಥ ಮಾಡಿದರೆ ದಂಡ: ಟಿ20 ಕ್ರಿಕೆಟ್‌ನ ಅಸಲಿ ಮಜಾವೇ ಅದರ ವೇಗ. ಆದ್ರೆ ಆಟಗಾರರು ಪದೇ ಪದೇ ಆಟ ನಿಲ್ಲಿಸುವುದರಿಂದ ವೀಕ್ಷಕರಿಗೆ ಬೇಸರವಾಗುತ್ತದೆ ಹಾಗೂ ಪಂದ್ಯದ ಲಯ ತಪ್ಪುತ್ತದೆ. ಐಪಿಎಲ್ ನಿಯಮಗಳ ಪ್ರಕಾರ, ನಿಗದಿತ ಸಮಯದೊಳಗೆ (90 ನಿಮಿಷ) ಓವರ್‌ಗಳನ್ನು ಪೂರ್ಣಗೊಳಿಸದಿದ್ದರೆ ತಂಡದ ನಾಯಕನಿಗೆ ದಂಡ ಹಾಗೂ ‘ಓವರ್-ರೇಟ್ ಪೆನಾಲ್ಟಿ’ (30 ಯಾರ್ಡ್ ವೃತ್ತದ ಹೊರಗೆ ಒಬ್ಬ ಫೀಲ್ಡರ್ ಕಡಿಮೆ ಇಡುವ ಶಿಕ್ಷೆ) ಬೀಳುತ್ತದೆ. ಗಾಯದ ಸಮಸ್ಯೆಯನ್ನು ಸಿಎಸ್‌ಕೆ ನಿಭಾಯಿಸಿದ ರೀತಿ ಇತರ ಫ್ರಾಂಚೈಸಿಗಳಿಗೆ ಮಾದರಿಯಾಗಿದ್ದು, ಟೈಮ್-ಪಾಸ್ ಮಾಡುವ ತಂಡಗಳ ವಿರುದ್ಧ ಐಪಿಎಲ್ ಆಡಳಿತ ಮಂಡಳಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಬೇಕೆಂಬ ಕೂಗು ಈಗ ಜೋರಾಗಿದೆ.