Home Advertisement
Home ಸುದ್ದಿ ರಾಜ್ಯ “ನನಗೆ ಮಾಹಿತಿ ಇಲ್ಲ”: ಕಾಂಗ್ರೆಸ್ ಬೆಳವಣಿಗೆಗೆ ಜಮೀರ್ ಪ್ರತಿಕ್ರಿಯೆ

“ನನಗೆ ಮಾಹಿತಿ ಇಲ್ಲ”: ಕಾಂಗ್ರೆಸ್ ಬೆಳವಣಿಗೆಗೆ ಜಮೀರ್ ಪ್ರತಿಕ್ರಿಯೆ

0
140

ಬೆಂಗಳೂರು: ಕಾಂಗ್ರೆಸ್ ಪಕ್ಷದೊಳಗಿನ ಅಲ್ಪಸಂಖ್ಯಾತ ಘಟಕದ ರಾಜಕೀಯ ಬೆಳವಣಿಗೆಗಳ ನಡುವೆಯೇ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಂಎಲ್‌ಸಿ ಕೆ. ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿರುವ ವೇಳೆ ತಾವು ಬೆಂಗಳೂರಿನಲ್ಲಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ನಡೆದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಬ್ಬಾರ್ ರಾಜೀನಾಮೆ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರ ರಾಜೀನಾಮೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಹೇಳಿದ್ದಾರೆ.

ಟಿಕೆಟ್ ಗೊಂದಲ – ಮುಸ್ಲಿಂ ನಾಯಕರಿಗೆ ಅವಕಾಶ ಕೇಳಿದ್ದೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ತಾವು ಏಳು ಮುಸ್ಲಿಂ ನಾಯಕರ ಹೆಸರನ್ನು ನೀಡಿದ್ದಾಗಿ ಜಮೀರ್ ಹೇಳಿದರು. “ಜಬ್ಬಾರ್‌ಗೆ ಟಿಕೆಟ್ ಕೇಳಲಿಲ್ಲ. ಅವರು ಈಗಾಗಲೇ ಎಂಎಲ್‌ಸಿ. ಆದರೆ ಉಳಿದ ಮುಸ್ಲಿಂ ನಾಯಕರಲ್ಲಿ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಕೆಪಿಸಿಸಿ ಸಭೆಯಲ್ಲಿ ಡಿ. ಕೆ. ಶಿವಕುಮಾರ್‌ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರ ಎದುರಲ್ಲೇ ಹೇಳಿದ್ದೆ” ಎಂದು ಸ್ಪಷ್ಟಪಡಿಸಿದರು.

“ನಾನು ಕೇಳಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ. ಆದರೂ ಟಿಕೆಟ್ ನೀಡಲಿಲ್ಲ. ಇದರಿಂದ ಅಸಮಾಧಾನ ಇದ್ದದ್ದು ನಿಜ, ಆದರೆ ಈಗ ಎಲ್ಲವೂ ಸರಿಹೋಗಿದೆ” ಎಂದರು.

ನಸೀರ್ ಅಹ್ಮದ್ ವಿಚಾರ – ಸ್ಪಷ್ಟನೆ ಇಲ್ಲ: ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ಅವರನ್ನು ತೆಗೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್, “ದಾವಣಗೆರೆಗೆ ಹೋಗಿಲ್ಲ ಎಂಬ ಕಾರಣ ಹೇಳಲಾಗಿದೆ ಎಂದು ಕೇಳಿದ್ದೇನೆ. ಆದರೆ ನಿಖರ ಕಾರಣ ಗೊತ್ತಿಲ್ಲ” ಎಂದು ಹೇಳಿದರು.