ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಕಠಿಣ ನೌಕಾ ದಿಗ್ಬಂಧನ ಘೋಷಿಸಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇರಾನ್ ಬಂದರುಗಳಿಗೆ ಪ್ರವೇಶಿಸುವ ಅಥವಾ ಅಲ್ಲಿಂದ ಹೊರಹೋಗುವ ಎಲ್ಲಾ ಹಡಗುಗಳ ಮೇಲೆ ಅಮೆರಿಕದ ನೌಕಾಪಡೆ ಕಟ್ಟು ನಿಟ್ಟಿನ ನಿಗಾ ವಹಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಅಮೆರಿಕದ ದಿಗ್ಬಂಧನವನ್ನು ಉಲ್ಲಂಘಿಸುವ ಯಾವುದೇ ಹಡಗುಗಳನ್ನು “ಸಂಪೂರ್ಣವಾಗಿ ನಾಶಪಡಿಸಲಾಗುವುದು” ಎಂದು ಟ್ರಂಪ್ ಕಠಿಣ ಸಂದೇಶ ನೀಡಿದ್ದಾರೆ. ವಿಶೇಷವಾಗಿ ಹೋರ್ಮುಜ್ (Strait of Hormuz) ಜಲಸಂಧಿಯನ್ನು ಮುಚ್ಚುವ ಬೆದರಿಕೆಯೂ ಪರಿಸ್ಥಿತಿಯನ್ನು ಗಂಭೀರಗೊಳಿಸಿದೆ. ಜಾಗತಿಕ ಇಂಧನ ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಈ ಪ್ರದೇಶದಲ್ಲಿ ಯಾವುದೇ ಅಶಾಂತಿ ಉಂಟಾದರೂ ಅದರ ಪರಿಣಾಮ ವಿಶ್ವ ಆರ್ಥಿಕತೆಯ ಮೇಲೆ ಬೀಳುವ ಸಾಧ್ಯತೆ ಇದೆ.
ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ‘Truth Social’ ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಇರಾನ್ ನೌಕಾಪಡೆಯ 158 ಹಡಗುಗಳನ್ನು ಅಮೆರಿಕ ಸಂಪೂರ್ಣವಾಗಿ ಧ್ವಂಸಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ, “ಫಾಸ್ಟ್ ಅಟ್ಯಾಕ್ ಶಿಪ್ಸ್” ಎಂದು ಕರೆಯಲ್ಪಡುವ ಇರಾನ್‌ನ ವೇಗದ ದಾಳಿ ಹಡಗುಗಳು ದಿಗ್ಬಂಧನ ಪ್ರದೇಶದತ್ತ ಬಂದರೆ ಅವುಗಳನ್ನು ಕೂಡ ತಕ್ಷಣವೇ ನಾಶಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದಕ್ಕೂ ಮೊದಲು ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ವಿಫಲವಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಸೂಚಿಸುತ್ತಿವೆ. ಅಮೆರಿಕದ ಈ ಕ್ರಮಕ್ಕೆ ಪ್ರತಿಯಾಗಿ ಇರಾನ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದರ ಮೇಲೆ ಜಾಗತಿಕ ರಾಜಕೀಯದ ದಿಕ್ಕು ನಿರ್ಧಾರವಾಗುವ ಸಾಧ್ಯತೆ ಇದೆ.
ಇದಲ್ಲದೆ, ಸಮುದ್ರ ಮಾರ್ಗವಾಗಿ ಅಮೆರಿಕ ಪ್ರವೇಶಿಸುವ ಮಾದಕವಸ್ತುಗಳ ಪ್ರಮಾಣವನ್ನು 98.2% ರಷ್ಟು ಕಡಿಮೆ ಮಾಡಲಾಗಿದೆ ಎಂದು ಟ್ರಂಪ್ ಇದೇ ವೇಳೆ ತಿಳಿಸಿದ್ದಾರೆ. ಈ ಹೇಳಿಕೆಗಳು ಸತ್ಯಾಸತ್ಯತೆ ಕುರಿತಾಗಿ ಅಂತಾರಾಷ್ಟ್ರೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸೈನಿಕ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಜಾಗತಿಕ ಸಮುದಾಯ ಕಣ್ಣಿಟ್ಟಿದೆ.





















