ರೋಮ್: ಶಾಲೆಗಳಲ್ಲಿ ಮುಖ ಮುಚ್ಚುವ ಬುರ್ಖಾ ಮತ್ತು ನಿಕಾಬ್ ಧರಿಸುವುದನ್ನು ನಿಷೇಧಿಸುವುದು ಸೇರಿದಂತೆ ಮಹತ್ವದ ಶಿಕ್ಷಣ ಸುಧಾರಣಾ ಮಸೂದೆಗೆ ಇಟಲಿ ಸಂಸತ್ತು ಅಂತಿಮ ಅನುಮೋದನೆ ನೀಡಿದೆ. ಅಲ್ಲದೆ, ತರಗತಿಗಳಲ್ಲಿ ವಿದೇಶಿ ಮೂಲದ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇ. 30ಕ್ಕೆ ಸೀಮಿತಗೊಳಿಸುವ ಪ್ರಸ್ತಾವನೆಗೂ ಒಪ್ಪಿಗೆ ದೊರೆತಿದೆ.
ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಮಂಡಿಸಿದ್ದ ‘ಡೆಕ್ರೆಟೊ ಸ್ಕೂಲಾ’ ಎಂಬ ಶಿಕ್ಷಣ ಸುಧಾರಣಾ ಶಾಸನಕ್ಕೆ ಸಂಸತ್ತಿನ ಕೆಳಮನೆಯಾದ ‘ಚೇಂಬರ್ ಆಫ್ ಡೆಪ್ಯೂಟೀಸ್’ ನವೆಂಬರ್ 26ರಂದು ಅನುಮೋದನೆ ನೀಡಿದೆ.
ಈ ಶಾಸನದ ಪ್ರಕಾರ, ಶಾಲೆಗಳಲ್ಲಿ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಬುರ್ಖಾ ಮತ್ತು ನಿಕಾಬ್ ಧರಿಸುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಜತೆಗೆ, ತರಗತಿಗಳಲ್ಲಿ ವಿದೇಶಿ ಮೂಲದ ವಿದ್ಯಾರ್ಥಿಗಳ ಪ್ರಮಾಣವನ್ನು ಶೇ. 30ಕ್ಕೆ ಸೀಮಿತಗೊಳಿಸುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಏಕರೂಪತೆ ತರುವ ಉದ್ದೇಶದಿಂದ ಈ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರದ ಕ್ರಮವನ್ನು ವಿವರಿಸಲಾಗಿದೆ.






















