Home Advertisement
Home ಸುದ್ದಿ ದೇಶ ಮಹಿಳಾ ಮೀಸಲಾತಿ ಮಸೂದೆ : ದೇಶದ ಮಹಿಳೆಯರಿಗೆ ಮೋದಿ ಪತ್ರ

ಮಹಿಳಾ ಮೀಸಲಾತಿ ಮಸೂದೆ : ದೇಶದ ಮಹಿಳೆಯರಿಗೆ ಮೋದಿ ಪತ್ರ

0
158

ನವದೆಹಲಿ: ಮುಂಬರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮಹಿಳಾ ಮೀಸಲಾತಿ ಅಡಿಯಲ್ಲಿ ನಡೆದರೆ ಭಾರತೀಯ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠ ಹಾಗೂ ಚೈತನ್ಯಪೂರ್ಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. B. R. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ದೇಶದ ಮಹಿಳೆಯರಿಗೆ ಬರೆದ ಪತ್ರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸುತ್ತಿರುವ ಪ್ರಗತಿಯನ್ನು ಉಲ್ಲೇಖಿಸಿ, ಶಾಸನಸಭೆಗಳಲ್ಲಿಯೂ ಅವರ ಪ್ರತಿನಿಧಿತ್ವ ಹೆಚ್ಚಾಗಬೇಕೆಂದು ಹೇಳಿದ್ದಾರೆ.

ವಿಶೇಷ ಅಧಿವೇಶನದ ಮಹತ್ವ: ಏಪ್ರಿಲ್ 16ರಿಂದ ಆರಂಭವಾಗಲಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರವಾಗಬೇಕು ಎಂದು ಪ್ರಧಾನಿ ಒತ್ತಾಯಿಸಿದ್ದಾರೆ. ಯಾವುದೇ ವಿಳಂಬವಾದರೂ ಅದು ದೇಶದ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

2029ರಿಂದಲೇ ಜಾರಿಗೆ ಯತ್ನ: 2023ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಕಾಯ್ದೆಯ ಪ್ರಕಾರ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಒದಗಿಸಲಾಗುತ್ತದೆ. ಮೂಲ ಕಾನೂನಿನ ಪ್ರಕಾರ 2027ರ ಜನಗಣತಿ ಬಳಿಕ ಕ್ಷೇತ್ರ ಮರುವಿಂಗಡಣೆ ನಡೆದು 2034ರ ವೇಳೆಗೆ ಜಾರಿಯಾಗಬೇಕಾಗಿತ್ತು.

ಆದರೆ ಇದೀಗ ಕೇಂದ್ರ ಸರ್ಕಾರ 2029ರ ಲೋಕಸಭೆ ಚುನಾವಣೆಯಿಂದಲೇ ಈ ಮೀಸಲಾತಿಯನ್ನು ಜಾರಿಗೆ ತರಲು ತಿದ್ದುಪಡಿ ತರಲು ಮುಂದಾಗಿದೆ.

ಸ್ಥಾನಗಳ ಏರಿಕೆ ಸಾಧ್ಯತೆ: ತಿದ್ದುಪಡಿ ಮಸೂದೆ ಅಂಗೀಕಾರವಾದಲ್ಲಿ ಲೋಕಸಭೆಯ ಒಟ್ಟು ಸ್ಥಾನಗಳು 816ಕ್ಕೆ ಏರಿಕೆಯಾಗಲಿದ್ದು, ಅದರಲ್ಲಿ ಸುಮಾರು 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆ ಇದೆ.

ಮಹಿಳಾ ಶಕ್ತಿಗೆ ಕರೆ: “ಮಹಿಳೆಯರು ತಮ್ಮ ಹಕ್ಕಿಗಾಗಿ ಕಾಯುವ ಅಗತ್ಯವಿಲ್ಲ. ಶಾಸನ ಸಭೆಗಳಲ್ಲಿ ಅವರ ಧ್ವನಿ ಬಲವಾಗಿದ್ರೆ ಪ್ರಜಾಪ್ರಭುತ್ವದ ಧ್ವನಿಯೂ ಬಲಗೊಳ್ಳುತ್ತದೆ” ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಈ ಐತಿಹಾಸಿಕ ನಿರ್ಧಾರಕ್ಕೆ ಬೆಂಬಲ ನೀಡುವಂತೆ ಸ್ಥಳೀಯ ಸಂಸದರಿಗೆ ಪತ್ರ ಬರೆಯಲು ಮಹಿಳೆಯರಿಗೆ ಅವರು ಮನವಿ ಮಾಡಿದ್ದಾರೆ.