ನೊಯ್ಡಾ: ವೇತನ ಹೆಚ್ಚಳದ ಬೇಡಿಕೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕಾರ್ಮಿಕರ ಪ್ರತಿಭಟನೆ ಇಂದು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ನೊಯ್ಡಾ ನಗರದ ಸೆಕ್ಟರ್ 60 ಹಾಗೂ ಫೇಸ್-2 ಕೈಗಾರಿಕಾ ಪ್ರದೇಶಗಳಲ್ಲಿ ಸಾವಿರಾರು ಕಾರ್ಮಿಕರು ಬೀದಿಗಿಳಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಕೆಲವು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಸೆಕ್ಟರ್ 1ರ ಬ್ಲಾಕ್ 84 ಪ್ರದೇಶದಲ್ಲಿ ಹೆಚ್ಚು ಗಲಭೆ ಸಂಭವಿಸಿದ್ದು, ಕಂಪನಿಗಳ ಆಸ್ತಿಪಾಸ್ತಿಗೂ ಹಾನಿ ಉಂಟಾಗಿದೆ.
ವೇತನ ಪರಿಷ್ಕರಣೆ ಬೇಡಿಕೆಯನ್ನು ಮುಂದಿಟ್ಟು ಕಾರ್ಮಿಕರು ಕಳೆದ ಮೂರು ದಿನಗಳಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಭಾನುವಾರ ನಡೆದ ಮಾತುಕತೆಗಳು ಫಲಕಾರಿಯಾಗದೇ ಹೋದ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ತೀವ್ರಗೊಂಡಿದೆ. ಹೆಚ್ಚುತ್ತಿರುವ ಹಣದುಬ್ಬರದ ನಡುವೆಯೂ ಪ್ರಸ್ತುತ ವೇತನ ಜೀವನ ಸಾಗಿಸಲು ಸಾಕಾಗುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದು, ಪರಿಸ್ಥಿತಿ ಹತೋಟಿಗೆ ತರಲು ಅಶ್ರುವಾಯು ಬಳಸಲಾಗಿದೆ. ಕೆಲವು ಕಡೆ ರಸ್ತೆ ತಡೆಗಟ್ಟಲು ಪ್ರಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿದ್ದು, ಘರ್ಷಣೆ ನಡೆದಿದೆ.
ಗೌತಮ ಬುದ್ಧನಗರ ಪೊಲೀಸ್ ಆಯುಕ್ತರು ಮಾತನಾಡಿ, “ಸ್ಥಿತಿ ನಿಯಂತ್ರಣದಲ್ಲಿದೆ. ಹೆಚ್ಚಿನ ಹಾನಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು” ಎಂದು ತಿಳಿಸಿದ್ದಾರೆ. ಇದೀಗ ಪ್ರದೇಶದಲ್ಲಿ ಭದ್ರತೆ ಕಠಿಣಗೊಳಿಸಲಾಗಿದ್ದು, ಪೊಲೀಸರು ನಿರಂತರ ನಿಗಾವಹಿಸಿದ್ದಾರೆ. ಕೈಗಾರಿಕಾ ವಲಯದಲ್ಲಿ ಸಾಮಾನ್ಯ ಸ್ಥಿತಿ ಪುನಃಸ್ಥಾಪಿಸಲು ಪ್ರಯತ್ನಗಳು ಮುಂದುವರಿದಿವೆ.






















