ದಾವಣಗೆರೆ: ಹಣದ ಆಸೆಗಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಹನಿಟ್ರ್ಯಾಪ್ (ಮಧುಬಂಧನ) ಪ್ರಕರಣದಲ್ಲಿ ಸಿಲುಕಿಸಿ ಅವರ ತೆಜೋವಧೆಗೆ ಮುಂದಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹರಿಹರ ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಎಚ್.ಎಸ್. ಶಿವಶಂಕರ್ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉನ್ನತ ಸ್ಥಾನದಲ್ಲಿರುವ ರಾಜಕಾರಣಿಗಳು, ಹೋರಾಟಗಾರರು, ಧಾರ್ಮಿಕ ನಾಯಕರು ಹಾಗೂ ಉದ್ಯಮಿಗಳನ್ನು ಗುರಿಯಾಗಿಸಿ ಹಣಕ್ಕಾಗಿ ಹನಿಟ್ರ್ಯಾಪ್ ಪ್ರಕರಣಗಳು ನಡೆಯುತ್ತಿವೆ. ಪಂಚಮಸಾಲಿ ೨ಎ ಹೋರಾಟದ ಪ್ರಮುಖ ಮುಖವಾಗಿರುವ ಸ್ವಾಮೀಜಿ ಅವರನ್ನೂ ಇದೇ ರೀತಿಯಲ್ಲಿ ಸಿಲುಕಿಸಿ ಅವರ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡುವ ಪ್ರಯತ್ನ ನಡೆದಿದೆ. ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
‘ಸ್ವಾಮೀಜಿ ಅವರ ಮೇಲೆ ಆರೋಪ ಮಾಡಿರುವ ಬೆಂಗಳೂರಿನ ಗುಂಪು ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ನೀಡಿ ನಂತರ ಕಾಣೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ಆರೋಪ ಮಾಡುವವರು ತಮ್ಮ ಬಳಿ ಇರುವ ಸಾಕ್ಷ್ಯಗಳನ್ನು ನೀಡಬೇಕು ಹಾಗೂ ತನಿಖೆಗೆ ಸಹಕರಿಸಬೇಕು’ ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರವು ಇಂತಹ ಗಂಭೀರ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡದೆ ಸಮಗ್ರ ತನಿಖೆ ನಡೆಸಬೇಕು. ಮಹಿಳಾ ಆಯೋಗದ ಅಧ್ಯಕ್ಷರು ದೂರು ನೀಡಿದವರನ್ನು ಕರೆಸಿ ದಾಖಲೆಗಳನ್ನು ಪರಿಶೀಲಿಸಬೇಕು. ಪ್ರಕರಣದ ಸತ್ಯಾಸತ್ಯತೆ ಹೊರ ಬರಲು ಬೇರುಮಟ್ಟದ ತನಿಖೆ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ಸೇರಿದಂತೆ ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು.























