ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ UGCET-2026 ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಬಿಡುಗಡೆಗೊಂಡಿದೆ. ಇದೇ ಏಪ್ರಿಲ್ 23 ಮತ್ತು 24ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ (Admit Card) ಡೌನ್‌ಲೋಡ್ ಮಾಡಲು ಅಧಿಕೃತ ಲಿಂಕ್ ಅನ್ನು KEA ಬಿಡುಗಡೆ ಮಾಡಿದೆ.
ಆದರೆ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಂಭೀರ ಎಚ್ಚರಿಕೆಯನ್ನೂ ನೀಡಲಾಗಿದೆ. ಕೆಲವು ಕಿಡಿಗೇಡಿಗಳು ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ, “ಪ್ರವೇಶ ಪತ್ರ ಡೌನ್‌ಲೋಡ್” ಎಂಬ ನೆಪದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ (IAS) ಅವರು ಸಾಮಾಜಿಕ ಜಾಲತಾಣದ ಮೂಲಕ ಈ ಕುರಿತು ಸ್ಪಷ್ಟನೆ ನೀಡಿದ್ದು, ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಕಲಿ ಲಿಂಕ್‌ಗಳ ಬಗ್ಗೆ ಎಚ್ಚರಿಕೆ: KEA ಪ್ರಕಾರ, ಕೆಲವು ಫೇಕ್ ಲಿಂಕ್‌ಗಳು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಈ ಲಿಂಕ್‌ಗಳ ಮೂಲಕ ಯಾವುದೇ ಪ್ರವೇಶ ಪತ್ರ ಡೌನ್‌ಲೋಡ್ ಸಾಧ್ಯವಿಲ್ಲ. ಬದಲಾಗಿ, ಸಂವೇದನಶೀಲ ಮಾಹಿತಿ ಸಂಗ್ರಹಿಸುವ ಅಪಾಯ ಇದೆ.
ಹೀಗಾಗಿ, ವಿದ್ಯಾರ್ಥಿಗಳು ಕೆಳಗಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು KEA ಅಧಿಕೃತ ವೆಬ್‌ಸೈಟ್‌ನಲ್ಲೇ ಲಾಗಿನ್ ಆಗಿ Admit Card ಡೌನ್‌ಲೋಡ್ ಮಾಡಿಕೊಳ್ಳಿ. ಸಾಮಾಜಿಕ ಜಾಲತಾಣದಲ್ಲಿ ಸಿಗುವ ಅನಪೇಕ್ಷಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಪರಿಚಿತ ವೆಬ್‌ಸೈಟ್‌ಗಳಲ್ಲಿ ಯಾವುದೇ ಮಾಹಿತಿ ನಮೂದಿಸಬೇಡಿ ಎಂದು KEA ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮತ್ತೊಮ್ಮೆ “ಎಚ್ಚರ… ಎಚ್ಚರ…” ಎಂಬ ಸಂದೇಶ ನೀಡಿ, ಸೈಬರ್ ಮೋಸಗಳಿಂದ ದೂರವಿರಲು ಮನವಿ ಮಾಡಿದ್ದಾರೆ.























