Home Advertisement
Home ನಮ್ಮ ಜಿಲ್ಲೆ ಕಲಬುರಗಿ `ಸಂಯುಕ್ತ ಕರ್ನಾಟಕ’ದಿಂದ 7, 8 ರಂದು ಆರೋಗ್ಯ-ಶಿಕ್ಷಣ ಮೇಳ

`ಸಂಯುಕ್ತ ಕರ್ನಾಟಕ’ದಿಂದ 7, 8 ರಂದು ಆರೋಗ್ಯ-ಶಿಕ್ಷಣ ಮೇಳ

0
170

2 ದಿನ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ * ಖ್ಯಾತ ವೈದ್ಯರು, ಶಿಕ್ಷಣ ತಜ್ಞರು ಭಾಗಿ

ಕಲಬುರಗಿ: ಲೋಕ ಶಿಕ್ಷಣ ಟ್ರಸ್ಟಿನ ಹೆಮ್ಮೆಯ ಪ್ರಕಟಣೆಯಾಗಿರುವ `ಸಂಯುಕ್ತ ಕರ್ನಾಟಕ’ದ ವತಿಯಿಂದ ಎಪ್ರಿಲ್ 7 ಮತ್ತು 8 ರಂದು ನಗರದ ಜೇವರ್ಗಿ ರಸ್ತೆಯ ಖಮಿತಕರ್ ಭವನದಲ್ಲಿ ಬೃಹತ್ ಆರೋಗ್ಯ ಮತ್ತು ಶಿಕ್ಷಣ ಮೇಳ ಆಯೋಜಿಸಲಾಗಿದೆ.

ಕಲ್ಯಾಣ ಕರ್ನಾಟಕದ ನಗರ, ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಮೇಳವನ್ನು ರೂಪಿಸಲಾಗಿದೆ.

ನಾಡಿನ ಖ್ಯಾತ ತಜ್ಞ ವೈದ್ಯರು, ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದಾರೆ: `ಸಿರಿ ಸಂಪದ’ ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗಿರುವ ಈ ಮೇಳವು ಕನ್ನಡ ಮಾಧ್ಯಮಲೋಕದಲ್ಲೇ ವಿನೂತನ, ವಿಶಿಷ್ಟ ಕಾರ್ಯಕ್ರಮವಾಗಿದೆ. ಬೆಂಗಳೂರು, ಬೀದರ ಮತ್ತು ಕಲಬುರಗಿಯ ಸುಪ್ರಸಿದ್ಧ ಆಸ್ಪತ್ರೆಗಳ ತಜ್ಞರು ತಮ್ಮ ವಿಶೇಷ ವೈದ್ಯಕೀಯ ತಂಡದೊಂದಿಗೆ ಪಾಲ್ಗೊಳ್ಳುತ್ತಿದ್ದು, ಉಚಿತ ಆರೋಗ್ಯ ತಪಾಸಣೆ, ಸಲಹೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

ಕ್ಯಾನ್ಸರ್, ನರರೋಗ, ಹೃದಯ, ಮಧುಮೇಹ, ಕಣ್ಣು, ಸ್ತ್ರೀ ರೋಗ, ಮಹಿಳೆಯರ ಆರೋಗ್ಯ ಸಮಸ್ಯೆಗಳು ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಗಳಿಗಾಗಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗುತ್ತದೆ. ಜನರು ತಮ್ಮ ಆರೋಗ್ಯದ ಬಗ್ಗೆ ನೇರವಾಗಿ ತಜ್ಞರಿಂದ ಸಲಹೆ ಪಡೆಯುವ ಅವಕಾಶವನ್ನು ಈ ಮೇಳ ಒದಗಿಸಲಿದೆ.

ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್, `ಥಟ್ ಅಂತ ಹೇಳಿ’ ಖ್ಯಾತಿಯ ಹಿರಿಯ ವೈದ್ಯ ಸಾಹಿತಿ ಡಾ. ನಾ. ಸೋಮೇಶ್ವರ ಮತ್ತಿತರರು ಪ್ರೇರಣಾದಾಯಿ ಉಪನ್ಯಾಸ ನೀಡಿ ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ.

ನಾಡಿನ ಖ್ಯಾತ ಕ್ಯಾನ್ಸರ್ ತಜ್ಞ ಡಾ. ಶೇಖರ್ ಪಾಟೀಲ್ ಉಕ್ಕಿನಾಳ ಅವರು ಕ್ಯಾನ್ಸರ್ ರೋಗದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ನರರೋಗ ತಜ್ಞ ಡಾ. ಶಿವಕುಮಾರ ಕುಪನೂರ್, ಸ್ತ್ರೀ ರೋಗ ತಜ್ಞರಾದ ಡಾ. ಭಾಗ್ಯಶ್ರೀ ಎಸ್. ಪಾಟೀಲ್, ಡಾ. ಮೀತಾ ಅಂಗಡಿ, ಡಾ. ಮಧುರಾ ಬನಾಳೆ ಮುಂತಾದವರು ಎರಡು ದಿನಗಳಂದು ಉಚಿತ ತಪಾಸಣೆ ಮಾಡಿ ಸಲಹೆ-ಸೂಚನೆ ನೀಡುವರು.

ಇದಲ್ಲದೇ ಹಾಸ್ಯಬ್ರಹ್ಮ ಗಂಗಾವತಿ ಪ್ರಾಣೇಶ (ಬೀಚಿ) ಮತ್ತು ತಂಡದವರಿಂದ ಹಾಸ್ಯಸಂಜೆ, ಖ್ಯಾತ ಗಾಯಕ ಅನಂತ ಕುಲಕರ್ಣಿ ಅವರಿಂದ ಸಂಗೀತ ಸಂಜೆ `ದಾಸವಾಣಿ’ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳೀಯ ಕಲಾವಿದರಿಂದ ಗಾಯನ ಮತ್ತಿತರ ಮನರಂಜನೆ ಕಾರ್ಯಕ್ರಮಗಳೂ ನಡೆಯಲಿವೆ.

ಎ. 7ರಂದು (ಮಂಗಳವಾರ) ಬೆಳಿಗ್ಗೆ 10 ಗಂಟೆಗೆ ಶಾಸಕ ಬಸವರಾಜ ಮತ್ತಿಮಡು ಅವರು ಮಳಿಗೆಗಳನ್ನು ಉದ್ಘಾಟಿಸುವರು. ಹೈ.ಕ. ಶಿಕ್ಷಣ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ, ಧರ್ಮದರ್ಶಿಗಳು ಹಾಗೂ ಮಾಜಿ ಶಾಸಕರಾದ ಯು.ಬಿ. ವೆಂಕಟೇಶ್, ಡಿ.ಆರ್. ಪಾಟೀಲ್, ಖ್ಯಾತ ಶಿಕ್ಷಣತಜ್ಞ ಡಾ. ಗುರುರಾಜ ಕರಜಗಿ, ಹಿರಿಯ ಉದ್ಯಮಿ ಕೇಶವ ದೇಸಾಯಿ ಉಪಸ್ಥಿತರಿರುವರು.

ಅಂದು ಬೆಳಿಗ್ಗೆ 10-30ಕ್ಕೆ ಮೇಳದ ಉದ್ಘಾಟನಾ ಸಮಾರಂಭ ನಡೆಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮೇಳ ಉದ್ಘಾಟಿಸುವರು. ಜಿಲ್ಲೆಯ ಸಚಿವರು, ಶಾಸಕರು ಹಾಗೂ ಇತರೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ: ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ವಿದೇಶಿ ಶಿಕ್ಷಣದ ಬಗ್ಗೆ ತಜ್ಞರಿಂದ ಸಮಗ್ರ ಮಾರ್ಗದರ್ಶನ ನೀಡಲಾಗುತ್ತದೆ. ಪಿಯುಸಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಲು ಮಾಹಿತಿ, ಮಾರ್ಗದರ್ಶನ, ಸಲಹೆ ಪಡೆಯಬಹುದಾಗಿದೆ. ವಿಶೇಷವಾಗಿ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಇದು ಬಹು ಉಪಯುಕ್ತವಾಗಲಿದೆ.

ಸಾಂಸ್ಕೃತಿಕ-ಮನರಂಜನಾ ಕಾರ್ಯಕ್ರಮ: ಮೇಳದ ವಿಶೇಷ ಆಕರ್ಷಣೆಯಾಗಿ ಯುವ ಕಲಾವಿದ ರುಮಿತ್ ಕಮಲಾಪುರ ಮತ್ತು ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಮಾಜಮುಖಿ ಪ್ರಯತ್ನ: ಸಾಮಾಜಿಕ ಜಾಗೃತಿ ಮತ್ತು ಜನಸೇವೆಯ ದೃಷ್ಟಿಯಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಎರಡೂ ಜೀವನದ ಪ್ರಮುಖ ಅಂಶಗಳಾಗಿರುವುದರಿಂದ, ಜನರಿಗೆ ಅವುಗಳ ಮಹತ್ವವನ್ನು ತಿಳಿಸಿ, ಜಾಗೃತಿ ಮೂಡಿಸುವುದೇ ಈ ಮೇಳದ ಮುಖ್ಯ ಉದ್ದೇಶ. ಮೇಳವನ್ನು ಸಾರ್ವಜನಿಕರಿಗೆ ಮುಕ್ತವಾಗಿ ತೆರೆಯಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕೆಂದು ಲೋಕ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ, ಧರ್ಮದರ್ಶಿಗಳಾದ ಯು.ಬಿ. ವೆಂಕಟೇಶ್, ಡಾ. ಗುರುರಾಜ ಕರಜಗಿ, ಡಿ.ಆರ್. ಪಾಟೀಲ್, ಕೇಶವ ದೇಸಾಯಿ ಮನವಿ ಮಾಡಿದ್ದಾರೆ.

ಈ ಬೃಹತ್ ಆರೋಗ್ಯ ಮತ್ತು ಶಿಕ್ಷಣ ಮೇಳವು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ದಿಕ್ಕನ್ನು ತೋರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.