ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಸೋಮಣ್ಣನವರಿಗೆ ಕೆಲಸವೇ ಇಲ್ಲ” ಎಂದು ಟೀಕಿಸಿದ ಹಿನ್ನೆಲೆ, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದು, “ನನ್ನ ಕಚೇರಿಗೆ ಬನ್ನಿ, ನನ್ನ ಕೆಲಸ ನೋಡಬಹುದು” ಎಂದು ಆಹ್ವಾನ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ, “ನೀವು ಮುಖ್ಯಮಂತ್ರಿಯಾಗಿ ಅಲ್ಲ, ಸಾಮಾನ್ಯ ವ್ಯಕ್ತಿಯಾಗಿ ಎರಡು-ಮೂರು ಗಂಟೆ ನನ್ನ ಕಚೇರಿಗೆ ಬನ್ನಿ. ನಾನು ಕೆಲಸ ಮಾಡ್ತೀನೋ ಇಲ್ವೋ ನಿಮಗೆ ಸ್ಪಷ್ಟವಾಗುತ್ತದೆ” ಎಂದು ಸವಾಲು ಹಾಕಿದರು.
ಇದೇ ವೇಳೆ ತಮ್ಮ ಕಾರ್ಯ ಸಾಧನೆಗಳನ್ನು ವಿವರಿಸಿದ ಅವರು, ದಕ್ಷಿಣ ಭಾರತದಲ್ಲಿ 18 ಹೊಸ ರೈಲು ಯೋಜನೆಗಳನ್ನು ಆರಂಭಿಸಿರುವುದಾಗಿ ತಿಳಿಸಿದರು. ಕೋವಿಡ್ ನಂತರ ಸ್ಥಗಿತಗೊಂಡಿದ್ದ 62 ಯೋಜನೆಗಳನ್ನು ಪುನರಾರಂಭಿಸಿದ್ದು, ಹಲವು ರೈಲು ಮಾರ್ಗಗಳನ್ನು ವಿಸ್ತರಿಸಿರುವುದಾಗಿ ಹೇಳಿದರು.
ಆಲಮಟ್ಟಿ–ಯಾದಗಿರಿ, ಭದ್ರಾವತಿ–ಚಿಕ್ಕಜಾಜೂರು ಸೇರಿದಂತೆ ಪ್ರಮುಖ ರೈಲು ಮಾರ್ಗಗಳ ಡಿಪಿಆರ್ ಪ್ರಕ್ರಿಯೆ ನಡೆಯುತ್ತಿದ್ದು, ಚಿಕ್ಕಜಾಜೂರು–ಬಳ್ಳಾರಿ ಮಾರ್ಗದ ಡಬ್ಲಿಂಗ್ ಕಾಮಗಾರಿಗೆ ಈಗಾಗಲೇ ₹3340 ಕೋಟಿ ವೆಚ್ಚದಲ್ಲಿ ಕೆಲಸ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ, ಗಿಣಗೇರಿ–ರಾಯಚೂರು, ಗದಗ–ವಾಡಿ, ಮಂಗಳೂರು–ಹುಬ್ಬಳ್ಳಿ ಹೊಸ ರೈಲು ಮಾರ್ಗಗಳ ಕಾಮಗಾರಿ ವೇಗವಾಗಿ ಸಾಗುತ್ತಿದೆ ಎಂದು ಹೇಳಿದರು. “ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನೇರವಾಗಿ ಬಂದು ನೋಡಿ” ಎಂದು ಸಿಎಂಗೆ ಮತ್ತೊಮ್ಮೆ ಆಹ್ವಾನ ನೀಡಿದರು.
ಸೋಮಣ್ಣ ಅವರು ತಮ್ಮ ಆಡಳಿತ ಅವಧಿಯಲ್ಲಿ 25 ಜಿಲ್ಲೆಗಳಲ್ಲಿ ಜನ ಅಹವಾಲು ಸಭೆ ನಡೆಸಿದ್ದು, ಕೇಂದ್ರ ಮತ್ತು ರಾಜ್ಯದ 11 ಯೋಜನೆಗಳಿಗೆ ಒಟ್ಟು ₹52,000 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾಗಿ ಹೇಳಿದರು.
“ನಿಮ್ಮ ಕಾಲದಲ್ಲಿ ವರ್ಷಕ್ಕೆ ₹400 ಕೋಟಿ ಅನುದಾನ ಕೊಡುತ್ತಿದ್ದರೆ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ₹7500 ಕೋಟಿ ಮೀರಿದೆ” ಎಂದು ಅವರು ವಾದಿಸಿದರು.
ಇದಲ್ಲದೆ, ₹1900 ಕೋಟಿ ವೆಚ್ಚದಲ್ಲಿ 61 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಹಾಗೂ 1657 ಕಿ.ಮೀ. ಹೊಸ ರೈಲು ಮಾರ್ಗ ನಿರ್ಮಾಣಗೊಂಡಿದೆ ಎಂದು ವಿವರಿಸಿದರು.



















