Home Advertisement
Home ನಮ್ಮ ಜಿಲ್ಲೆ ಉಡುಪಿ ಯುವಕನ ಅಪಹರಣ: ಕೋಕಾ ಕಾಯ್ದೆಯಡಿ 7 ಜನರ ಬಂಧನ

ಯುವಕನ ಅಪಹರಣ: ಕೋಕಾ ಕಾಯ್ದೆಯಡಿ 7 ಜನರ ಬಂಧನ

0
29

ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತೇಜಸ್ ಎಂಬ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ)ಯಡಿ ಏಳು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ದೇವಿಪ್ರಸಾದ್ ಶೆಟ್ಟಿ, ಸುಜಿತ್, ಸುದೀಪ್, ಶ್ರೀಷಾ ಆನಂದ ಶೆಟ್ಟಿ, ಮಿಥುನ್, ಸುಹಾಸ್ ಮತ್ತು ಮನೋಜ್ ವಿ. ಕೊಟ್ಯಾನ್ ಬಂಧಿತರು. ಸಿದ್ದಾಪುರ ಗ್ರಾಮದ ಮೋಹನದಾಸ್ ಶೆಟ್ಟಿ ಪುತ್ರ ತೇಜಸ್‌ನ್ನು 2025ರ ನವೆಂಬರ್ 19ರಂದು ಮಧ್ಯಾಹ್ನ ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್‌ ಎದುರು ಅಪರಿಚಿತರು ಅಪಹರಿಸಿಕೊಂಡು ಹೋಗಿರುವುದು ತಿಳಿದುಬಂದಿದೆ.

ಘಟನೆ ಕುರಿತು ತೇಜಸ್‌ನ ಸ್ನೇಹಿತ ಪ್ರಜ್ವಲ್ ಎಂಬವರಿಗೆ ವಾಟ್ಸಾಪ್‌ ಮೂಲಕ ಕರೆ ಬಂದಿದ್ದು, ಆರೋಪಿಗಳು ತೇಜಸ್ ತಮ್ಮ ವಶದಲ್ಲಿರುವುದಾಗಿ ತಿಳಿಸಿದ್ದರು. ಆರೋಪಿಗಳು ಮೊದಲಿಗೆ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ಅದನ್ನು 3 ಕೋಟಿ ರೂ.ಗೆ ಹೆಚ್ಚಿಸಿ, ಹಣ ನೀಡದಿದ್ದರೆ ತೇಜಸ್‌ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ದೇವಿಪ್ರಸಾದ್ ಶೆಟ್ಟಿ, ಸುಜಿತ್, ಸುದೀಪ್, ಶ್ರೀಷಾ ಆನಂದ ಶೆಟ್ಟಿ, ಮಿಥುನ್, ಸುಹಾಸ್ ಮತ್ತು ಮನೋಜ್ ವಿ. ಕೊಟ್ಯಾನ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದೇ ವೇಳೆ ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ ಕೋಡಿಕೆರೆ (42) ಮತ್ತು ಚೇತನ್ ಪಡೀಲ್ (38) ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸ್‌ ಶೋಧ ಕಾರ್ಯ ಮುಂದುವರಿದಿದೆ. ಅವರ ವಿರುದ್ಧ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ.

ಪರಾರಿಯಾದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರೂ. ನಗದು ಬಹುಮಾನ ಘೋಷಿಸಲಾಗಿದೆ. ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಲು ಮನವಿ ಮಾಡಲಾಗಿದೆ.