Home Advertisement
Home ನಮ್ಮ ಜಿಲ್ಲೆ ಬೀದರ್ ಆಕಸ್ಮಿಕ ಬೆಂಕಿ: 45 ಕುರಿ ಸಹಿತ ಕುರಿಗಾಹಿ ಸಜೀವ ದಹನ

ಆಕಸ್ಮಿಕ ಬೆಂಕಿ: 45 ಕುರಿ ಸಹಿತ ಕುರಿಗಾಹಿ ಸಜೀವ ದಹನ

0
19

ಬೀದರ್: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 45 ಕುರಿಗಳ ಸಮೇತ ಕುರಿಗಾಹಿ ಸಜೀವ ದಹನಗೊಂಡ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬೋರಾಳ್ ಗ್ರಾಮದಲ್ಲಿ ಕಳೆದ ಮಧ್ಯರಾತ್ರಿ ನಡೆದಿದೆ.

ಗ್ರಾಮದ ಶಂಕರ್ ವೀರಗೊಂಡ ಮೇತ್ರೆ (63) ಕುರಿಗಳನ್ನು ಬೆಂಕಿಯ ಕೆನ್ನಾಲಿಗೆಯಿಂದ ಬಚಾವ್ ಮಾಡಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ದುರಂತ ಸಂಭವಿಸಿದ ಶಂಕೆ ವ್ಯಕ್ತವಾಗಿದೆ.

ಶಂಕರ್ ಮೇತ್ರೆ ಅವರ ಹೊಲದಲ್ಲಿ ತಗಡಿನ ಶೆಡ್ ಇದೆ. ಇದರಲ್ಲಿ ಕುರಿ, ಮೇಕೆಗಳನ್ನು ಕಟ್ಟುತ್ತಾರೆ. ಇದಲ್ಲದೆ ವಿವಿಧ ಆಹಾರ ಧಾನ್ಯದ ಮೂಟೆ (ಚೀಲ) ಗಳನ್ನು ಸಹ ಇಲ್ಲಿಟ್ಟಿದ್ದರು. ರಾತ್ರಿ ಆಕಸ್ಮಿಕವಾಗಿ ಶೆಡ್‌ಗೆ ಬೆಂಕಿ ತಗುಲಿದೆ. ಕ್ಷಣಾರ್ಧದಲ್ಲೇ ಬೆಂಕಿಯ ಕೆನ್ನಾಲಿಗೆ ಚಾಚಿದೆ. ಬೆಂಕಿ ಹೊತ್ತಿರುವುದನ್ನು ಕಂಡ ಶಂಕರ್ ಮೇತ್ರೆ, ತಕ್ಷಣ ಕುರಿಗಳನ್ನು ಬಿಟ್ಟುಕೊಟ್ಟು ಬಚಾವ್ ಮಾಡಲು ಶೆಡ್‌ನೊಳಗೆ ನುಗ್ಗಿದ್ದಾರೆ. ಈ ವೇಳೆ ವ್ಯಾಪಕವಾಗಿ ಆವರಿಸಿದ್ದ ದಟ್ಟ ಹೊಗೆ, ಬೆಂಕಿ ಜ್ವಾಲೆಗೆ ಸಿಲುಕಿ ಅಲ್ಲೇ ದಹನಗೊಂಡಿದ್ದಾರೆ. ಶೆಡ್‌ನಲ್ಲಿದ್ದ ಎಲ್ಲ 45 ಕುರಿ, ಮೇಕೆಗಳು ಸಹ ಸಜೀವ ದಹನವಾಗಿವೆ.

ಬೆಂಕಿ ಹೊತ್ತಿದಂತೆಯೇ ಗಾಳಿಯಲ್ಲಿ ಒಮ್ಮೆಲೆ ಧಗಧಗ ಜೋರಾಗಿ ವ್ಯಾಪಿಸಿದೆ. ಹೀಗಾಗಿ ಸ್ಥಳೀಯರು, ಅಗ್ನಿಶಾಮಕ ತಂಡ ಅದೆಷ್ಟೇ ಪ್ರಯತ್ನಪಟ್ಟರೂ ಯಾವುದೇ ಫಲ ನೀಡಿಲ್ಲ. ಶಂಕರ್ ಮೇತ್ರೆ ಸಮೇತ 4.50 ಲಕ್ಷದ ಕುರಿ, ಮೇಕೆಗಳು, 80 ಸಾವಿರದ ಹತ್ತಿ, 1 ಲಕ್ಷದಷ್ಟು ಕುಸುಬೆ ಬೆಳೆ ಇತರೆ ವಸ್ತು ಸುಟ್ಟು ಭಸ್ಮವಾಗಿವೆ.

ಬೆಂಕಿ ಹೇಗೆ ತಗುಲಿದೆ ಎಂಬ ನಿಖರ ಕಾರಣ ಗೊತ್ತಾಗಿಲ್ಲ. ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಆಗಿದೆಯೇ ಅಥವಾ ಬೇರೇನಾದರೂ ಬೆಳವಣಿಗೆ ಇವೆಯೇ ಎಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ.