Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಕೆಪಿಸಿಸಿ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ: ಡಿಕೆಶಿ

ಕೆಪಿಸಿಸಿ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ: ಡಿಕೆಶಿ

0
39

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ಮೇಲಿನ ಅಭಿಮಾನ ಹಾಗೂ ಕೋವಿಡ್ ಸಂದರ್ಭದಲ್ಲಿನ ಅವರು ನೀಡಿದ ನೆರವು ಮತ್ತು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಇವುಗಳ ಪ್ರಭಾವದಿಂದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶೇ. 79ರಷ್ಟು ಮತದಾರರು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಒಲವು ತೋರಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ನಡೆಸಿದ ಸಮೀಕ್ಷೆಯಲ್ಲಿ ಶಾಮನೂರು ಸಮರ್ಥ ಗೆಲ್ಲುವುದು ಖಚಿತವಾಗಿದೆ. ದಕ್ಷಿಣದಲ್ಲಿ ದೀನದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು ಎಂದರು.

ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚಗ್ಯಾರಂಟಿ ಯೋಜನೆಗಳನ್ನು ಕ್ಷೇತ್ರ ವ್ಯಾಪ್ತಿಯ 59 ಸಾವಿರ ಮನೆಗಳು ಉಚಿತ ವಿದ್ಯುತ್ ಪಡೆಯುತ್ತಿವೆ. ಈ ಕುಟುಂಬಗಳ ಮಹಿಳೆಯರು ‘ಗೃಹಲಕ್ಷ್ಮೀ’ ಫಲಾನುಭವಿಗಳು. 1.40 ಲಕ್ಷ ಜನರಿಗೆ ‘ಅನ್ನಭಾಗ್ಯ’ ಯೋಜನೆ ತಲುಪುತ್ತಿದೆ. ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಉಂಟಾಗುತ್ತಿರುವ ಹೊರೆಯನ್ನು ‘ಗ್ಯಾರಂಟಿ’ ಯೋಜನೆಗಳು ತಪ್ಪಿಸಿವೆ. ಉಪಚುನಾವಣಾ ಕಣದಲ್ಲಿ ‘ಪಂಚಗ್ಯಾರಂಟಿ’ಗಳು ಕೈಹಿಡಿಯುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇರಳ ಚುನಾವಣೆಯ ಕಾಂಗ್ರೆಸ್ ಸ್ಟಾರ್ ಪ್ರಚಾರಕರು. ಹಲವು ಜವಾಬ್ದಾರಿಗಳನ್ನು ಪಕ್ಷ ಅವರಿಗೆ ನೀಡಿದೆ. ಅಲ್ಲಿಯ ಕೆಲಸ ಪೂರ್ಣಗೊಳಿಸಿದ ಬಳಿಕ ಉಪಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ. ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ಈಗಾಗಲೇ ಅಲ್ಪಸಂಖ್ಯಾತ ಸಮುದಾಯದ ಅನೇಕ ಮುಖಂಡರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಒಬ್ಬ ವ್ಯಕ್ತಿಯಿಂದ ಪಕ್ಷ ನಡೆಯುವುದಿಲ್ಲ. ಕಾಂಗ್ರೆಸ್‌ಗೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಮುಖ್ಯ ಅಲ್ಲ. ಪಕ್ಷದ ಸಿದ್ಧಾಂತದ ಮೇಲೆ ಚುನಾವಣೆ ನಡೆಯುತ್ತಿದೆ ಎಂದರು.