Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದೇಶದಲ್ಲಿ ತ್ರಿಭಾಷಾ ಸೂತ್ರ ತಂದದ್ದೇ ಕಾಂಗ್ರೆಸ್: ಆರ್‌. ಅಶೋಕ

ದೇಶದಲ್ಲಿ ತ್ರಿಭಾಷಾ ಸೂತ್ರ ತಂದದ್ದೇ ಕಾಂಗ್ರೆಸ್: ಆರ್‌. ಅಶೋಕ

0
49

ದಾವಣಗೆರೆ: ಹಿಂದಿ ಹೇರಿಕೆ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಇತಿಹಾಸ ನೆನಪಿಸಿಕೊಳ್ಳಲಿ. ದೇಶದಲ್ಲಿ ತ್ರಿಭಾಷಾ ಸೂತ್ರವನ್ನು ತಂದವರು ಮತ್ತು ಪ್ರಚಾರ ಮಾಡಿದವರು ಇದೇ ಕಾಂಗ್ರೆಸ್‌ನವರೇ ಹೊರತು ಬಿಜೆಪಿಯಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ಹಿಂದಿ ಭಾಷಾ ವಿರೋಧಿ ನೀತಿಯನ್ನು ಖಂಡಿಸಿದ್ದಾರೆ.

ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ತ್ರಿಭಾಷಾ ಸೂತ್ರವನ್ನು ತಂದವರು ಮಹಾತ್ಮ ಗಾಂಧೀಜಿ, ನೆಹರು ಮತ್ತು ಇಂದಿರಾ ಗಾಂಧಿಯವರು. ಹಿಂದಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಗಾಂಧೀಜಿಯವರು 30 ವರ್ಷ ಕೆಲಸ ಮಾಡಿದ್ದಾರೆ. ಎಲ್ಲಾ ಜಿಲ್ಲೆ ಮತ್ತು ನಗರಗಳಿಗೆ ಹಿಂದಿಯನ್ನು ತಲುಪಿಸಿದವರು ಕಾಂಗ್ರೆಸ್‌ನವರೇ ಎಂದು ಅವರು ಸ್ಪಷ್ಟಪಡಿಸಿದರು.

ಶಿಕ್ಷಣ ಕ್ಷೇತ್ರದಲ್ಲಿನ ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರಗಳನ್ನು ಖಂಡಿಸಿದ ಅವರು, ವರ್ಷವಿಡೀ ಹಿಂದಿ ಭಾಷೆಯನ್ನು ವ್ಯಾಸಂಗ ಮಾಡಿ ಪರೀಕ್ಷೆಗೆ ಸಿದ್ಧರಾಗಿದ್ದ ಸುಮಾರು ಒಂಬತ್ತು ಲಕ್ಷಕ್ಕೂ ಹೆಚ್ಚು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಸರ್ಕಾರದ ಈ ಹಠಾತ್ ನಿರ್ಧಾರದಿಂದ ದೊಡ್ಡ ಅನ್ಯಾಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಐಎಎಸ್, ಐಪಿಎಸ್ ಅಥವಾ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಬೇರೆ ರಾಜ್ಯಗಳಲ್ಲಿ ಕೆಲಸ ನಿರ್ವಹಿಸಲು ಹಿಂದಿ ಭಾಷೆಯ ಜ್ಞಾನ ಅತ್ಯಗತ್ಯ. ಅಂತಹ ಅವಕಾಶವನ್ನೇ ಸರ್ಕಾರ ಈಗ ಕಿತ್ತುಕೊಂಡಿದೆ ಜತೆಗೆ ಹಿಂದಿ ಭಾಷಾ ಶಿಕ್ಷಕರಿಗೂ ಅನ್ಯಾಯವಾಗಿದೆ ಈ ಹಠಾತ್ ನಿರ್ಧಾರ ನೋಡಿದರೆ `ತುಘಲಕ್ ದರ್ಬಾರ್’ ಎಂಬುದು ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಟೋಲ್ ದರ ಏರಿಕೆ ಬಗ್ಗೆ ಸುರ್ಜೇವಾಲ ಪ್ರಶ್ನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರ ಮತ್ತು ಪೆಟ್ರೋಲ್, ಡೀಸೆಲ್ ದರಗಳ ಇಳಿಕೆ, ತೆರಿಗೆ ಕಡಿಮೆ ಮಾಡಿದಾಗ ಸುರ್ಜೇವಾಲ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

ಇನ್ನು ಶಾಸಕರಿಗೆ ಉಚಿತ ಐಪಿಎಲ್ ಟಿಕೆಟ್ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಹಿಂದೆಯೂ ಶಾಸಕರಿಗೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಈಗ ಶಾಸಕರು ಹೆಚ್ಚಿನ ಟಿಕೆಟ್ ಕೇಳುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ. ನನ್ನ ವೈಯಕ್ತಿಕ ಅಭಿಪ್ರಾಯದಂತೆ, ಒಂದು ಟಿಕೆಟ್ ಮಾತ್ರ ಉಚಿತ ಪಡೆದು ಶಾಸಕರು ಹಣ ನೀಡಿ ಟಿಕೆಟ್ ಖರೀದಿಸುವುದು ಸೂಕ್ತ. ಹಾಗೆಯೇ ಈ ಟಿಕೆಟ್‌ಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರದ ಕ್ರಿಕೆಟ್ ಕ್ಲಬ್‌ಗಳಿಗೆ ಅಥವಾ ಕ್ರೀಡಾಸಕ್ತ ಮಕ್ಕಳಿಗೆ ನೀಡಿದರೆ ಅವರು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಶೋಕ್ ಅವರು ಅಭಿಪ್ರಾಯಿಸಿದರು.