ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಮಂಗಳವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಜೀವ ದಹನಗೊಂಡು ಸಾವನ್ನಪ್ಪಿದ ಘಟನೆ ಸಂಚಲನ ಮೂಡಿಸಿದೆ.
ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯ ಕನ್ನೊಳ್ಳಿ ಟೋಲ್ ಪ್ಲಾಜಾ ಬಳಿ ವೇಗವಾಗಿ ಸಾಗುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಬೈಕ್ ಬಸ್ಸಿನೊಳಗೆ ಸಿಲುಕಿಕೊಂಡು ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ.
ಈ ವೇಳೆ ಬೈಕ್ ಸವಾರ ಸಿಂದಗಿಯ ಅಲ್ಲಾಪುರ ಲೇಔಟ್ ನಿವಾಸಿ ಅಭಿಷೇಕ ಸಾಹೇಬಗೌಡ ನಾಗರಹಳ್ಳಿ (19) ಬಸ್ಸಿನೊಳಗೆ ಸಿಲುಕಿಕೊಂಡು ಸಜೀವ ದಹನಗೊಂಡಿದ್ದಾನೆ. ಘಟನೆ ಸ್ಥಳದಲ್ಲೇ ಅವನು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ವೇಗವಾಗಿ ವ್ಯಾಪಿಸಿ, ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ತಕ್ಷಣ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ತೀವ್ರತೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.























