ಚಿನ್ನಸ್ವಾಮಿಯಲ್ಲಿ IPL ಭಾವನಾತ್ಮಕ ಆರಂಭ: RCBಯಿಂದ ಅಭಿಮಾನಿಗಳಿಗೆ ಅಪೂರ್ವ ನಮನ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿರುವ ಸಂದರ್ಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮಾನವೀಯತೆ ಮತ್ತು ಕ್ರೀಡಾ ಸಂಸ್ಕೃತಿಗೆ ಮಾದರಿಯಾಗುವ ಮಹತ್ವದ ನಿರ್ಧಾರ ಕೈಗೊಂಡಿವೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಲಿತದ ದುರ್ಘಟನೆಯಲ್ಲಿ ಮೃತಪಟ್ಟ 11 ಅಭಿಮಾನಿಗಳಿಗೆ ಈ ಬಾರಿಯ ಐಪಿಎಲ್‌ನಲ್ಲಿ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ.
ಉದ್ಘಾಟನಾ ಪಂದ್ಯಕ್ಕೂ ಮೊದಲು ವಿಶೇಷ ಕಾರ್ಯಕ್ರಮ : ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ನಡುವೆ ಪಂದ್ಯ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ 1 ನಿಮಿಷದ ಮೌನಾಚರಣೆ ಹಾಗೂ ದೊಡ್ಡ ಸ್ಕ್ರೀನ್ ಮೇಲೆ ಮೃತ ಅಭಿಮಾನಿಗಳ ಹೆಸರು ಪ್ರದರ್ಶನ ಮಾಡುವ ಮೂಲಕ ಕ್ರೀಡಾಂಗಣದಲ್ಲಿ ವಿಶೇಷ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು ಇವುಗಳ ಮೂಲಕ ಭಾವನಾತ್ಮಕ ವಾತಾವರಣ ಸೃಷ್ಟಿಯಾಗಲಿದೆ.
11 ಅಭಿಮಾನಿಗಳ 11 ಆಸನಗಳ ಮೂಲಕ ಶಾಶ್ವತ ಸ್ಮರಣೆ : KSCA ಮಹತ್ವದ ನಿರ್ಧಾರ ಕೈಗೊಂಡಿದ್ದು ಕ್ರೀಡಾಂಗಣದಲ್ಲಿ 11 ಆಸನಗಳನ್ನು ಶಾಶ್ವತವಾಗಿ ಮೀಸಲಿಡಲಾಗಿದೆ. ಈ ಆಸನಗಳನ್ನು ಯಾವ ಪಂದ್ಯಕ್ಕೂ ಮಾರಾಟ ಮಾಡುವುದಿಲ್ಲ. IPL ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿಯೂ ಖಾಲಿಯೇ ಇರುತ್ತವೆ. ಆ ಸ್ಥಳವನ್ನು ಗೌರವದ “ಸ್ಮಾರಕ ಪ್ರದೇಶ”ವಾಗಿ ಗುರುತಿಸಲಾಗುತ್ತದೆ.
RCB ಆಟಗಾರರಿಂದ ವಿಶೇಷ ಗೌರವ : ಅಭ್ಯಾಸದ ವೇಳೆ RCB ಆಟಗಾರರು 11 ನಂಬರ್ ಜರ್ಸಿ ಧರಿಸಿ ಅಭ್ಯಾಸ ನಡೆಸುತ್ತಾರೆ, ಅಭ್ಯಾಸ ಪಂದ್ಯದ ಜರ್ಸಿಯಲ್ಲಿ 11 ನಂಬರ್ ದಾಖಲಿಸಲಾಗಿದೆ. ಇನ್ನು ಬಿಸಿಸಿಐ ಐಪಿಎಲ್ ಹಾಗೂ ಐಸಿಸಿ ನಿಯಮದ ಪ್ರಕಾರ ಪಂದ್ಯದಲ್ಲಿ ಒಂದೇ ನಂಬರ್ ಜರ್ಸಿಯಲ್ಲಿ ಕಣಕ್ಕಿಳಿಯಲು ಸಾಧ್ಯವಿಲ್ಲ. ಹೀಗಾಗಿ ಆರ್‌ಸಿಬಿ ಅಭ್ಯಾಸದ ವೇಳೆ 11 ಜರ್ಸಿ ತೊಡಲಿದೆ. ಅಭ್ಯಾಸ ಪಂದ್ಯದ ಮೂಲಕ ಗೌರವ ಸಲ್ಲಿಸಲಾಗುವುದು.
RCB CEO ಪ್ರತಿಕ್ರಿಯೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಿಇಒ (CEO) ಆಗಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಮೆನನ್ (Rajesh Menon) ಈ ಕುರಿತಂತೆ ಮಾತನಾಡಿ “ನಮ್ಮ ಉದ್ದೇಶ ನೋವನ್ನು ಮರುಕಳಿಸುವುದಲ್ಲ, ಆ 11 ಜೀವಗಳನ್ನು ಗೌರವಿಸುವುದು.” ಎಂದಿದ್ದಾರೆ.
ಅಭಿಮಾನಿಗಳಲ್ಲಿ ಭಾವುಕತೆ : ಈ ನಿರ್ಧಾರ ಕೇವಲ ಕ್ರೀಡಾ ಸುದ್ದಿ ಮಾತ್ರವಲ್ಲ, ಅಭಿಮಾನಿಗಳೊಂದಿಗೆ ತಂಡದ ನಂಟಿನ ಪ್ರತಿಬಿಂಬವಾಗಿದೆ. ಕ್ರೀಡಾಂಗಣವು ಕೇವಲ ಪಂದ್ಯಗಳ ವೇದಿಕೆಯಲ್ಲ, ಭಾವನೆಗಳ ಸ್ಥಳವೂ ಹೌದು ಎಂಬುದನ್ನು ಈ ಘಟನೆ ಮತ್ತೆ ನೆನಪಿಸಿದೆ.






















