Home Advertisement
Home ಸುದ್ದಿ ರಾಜ್ಯ ತಮಿಳುನಾಡು ಚುನಾವಣಾ ಕಣದಲ್ಲಿ ಎನ್‌ಡಿಎ ಒಗ್ಗಟ್ಟು Vs ವಿಜಯ್; ಸೀಟು ಹಂಚಿಕೆಯಲ್ಲೇ ದೋಸ್ತಿಗಳ ರಣತಂತ್ರ ಹೇಗಿದೆ?

ತಮಿಳುನಾಡು ಚುನಾವಣಾ ಕಣದಲ್ಲಿ ಎನ್‌ಡಿಎ ಒಗ್ಗಟ್ಟು Vs ವಿಜಯ್; ಸೀಟು ಹಂಚಿಕೆಯಲ್ಲೇ ದೋಸ್ತಿಗಳ ರಣತಂತ್ರ ಹೇಗಿದೆ?

0
167

ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಜೋರಾಗಿದೆ. ಎನ್‌ಡಿಎ ಮೈತ್ರಿಕೂಟವು ಮಹತ್ವದ ಹೆಜ್ಜೆ ಇಟ್ಟು, ಸೀಟು ಹಂಚಿಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಒಟ್ಟು 234 ಕ್ಷೇತ್ರಗಳ ಪೈಕಿ, ಎಐಎಡಿಎಂಕೆ 178 ಸ್ಥಾನಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದರೆ, ಬಿಜೆಪಿ 27 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ. ಜೊತೆಗೆ ಪಿಎಂಕೆ 18 ಮತ್ತು ಎಎಂಎಂಕೆ 11 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಚೆನ್ನೈನ ರಾಯಪೆಟ್ಟಾದಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಸೀಟು ಹಂಚಿಕೆ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸಮ್ಮುಖದಲ್ಲಿ ಈ ಒಪ್ಪಂದ ಅಂತಿಮಗೊಂಡಿತು.

ಈ ಬಗ್ಗೆ ಮಾತನಾಡಿದ ಪಳನಿಸ್ವಾಮಿ, “ನಮ್ಮ ಮೈತ್ರಿಕೂಟ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದೆ. ರಾಜ್ಯದಲ್ಲಿ ಬಹುಮತ ಪಡೆದು ಸರ್ಕಾರ ರಚಿಸುವ ವಿಶ್ವಾಸ ನಮ್ಮದು” ಎಂದು ತಿಳಿಸಿದ್ದಾರೆ.

2021ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಸ್ಥಾನಗಳಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ಬಾರಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಇದೀಗ 27 ಸ್ಥಾನಗಳಲ್ಲಿ ತನ್ನ ಶಕ್ತಿ ಪರೀಕ್ಷೆಗೆ ಇಳಿದಿದೆ. ಇದರಿಂದ ಈ ಬಾರಿ ಎನ್‌ಡಿಎ ಮೈತ್ರಿಕೂಟ ಹೆಚ್ಚು ಬಲಿಷ್ಠವಾಗಿ ಕಣಕ್ಕಿಳಿದಿದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ.

ಇನ್ನೊಂದೆಡೆ, ಪುದುಚೇರಿಯ ರಾಜಕೀಯದಲ್ಲೂ ಹೊಸ ಚಲನವಲನ ಕಂಡುಬರುತ್ತಿದೆ. ಜನಪ್ರಿಯ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ, ಯಾವುದೇ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪುದುಚೇರಿಯ ಒಟ್ಟು 30 ಕ್ಷೇತ್ರಗಳಿಗೆ ಟಿವಿಕೆ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಜನರ ಶಕ್ತಿಯ ಮೇಲೆ ನಂಬಿಕೆ ಇಟ್ಟು ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. ಮೈತ್ರಿ ರಾಜಕೀಯ ಒಂದು ಕಡೆ ಸಾಗುತ್ತಿದ್ದರೆ, ಇನ್ನೊಂದೆಡೆ ಸ್ವತಂತ್ರ ಹೋರಾಟದ ಘೋಷಣೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಒಟ್ಟಿನಲ್ಲಿ, ತಮಿಳುನಾಡು ಮತ್ತು ಪುದುಚೇರಿ ರಾಜಕೀಯ ರಂಗ ದಿನದಿಂದ ದಿನಕ್ಕೆ ರಂಗೇರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಪೈಪೋಟಿ ಕಾಣುವ ಸಾಧ್ಯತೆ ಇದೆ. ಈಗ ಎಲ್ಲರ ಗಮನ ಮೇ 04ರ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ.