ಇನ್ನೇನು ಮಾರ್ಚ್ ತಿಂಗಳು ಮುಗಿತಾ ಬಂತು ಈ ಹೊತ್ತಿನ್ನಲ್ಲೇ ಏಪ್ರಿಲ್ 1 ಅಂದ್ರೆ ಮೊದಲು ನೆನಪಾಗೋದೇ ಏಪ್ರಿಲ್ ಫೂಲ್. ಆದ್ರೆ ಇದೇ ದಿನ ದೇಶದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಹಾಗಾದ್ರೆ ಈ ರೂಲ್ಸ್ ಗ್ರಾಹಕರಿಗೆ ‘ಫೂಲ್’ ಮಾಡುತ್ವಾ ಅಥವಾ ಅನುಕೂಲವಾಗುತ್ತಾ ಅನ್ನೋದನ್ನ ತಿಳಿಬೇಕು ಅಂದ್ರೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಭಾರತದ ಬ್ಯಾಂಕ್‌ಗಳಲ್ಲಿ ಏಪ್ರಿಲ್ 1ರಿಂದ ಹೊಸ ಎಟಿಎಂ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಈ ನಿಯಮಗಳು ಹಣ ತೆಗೆಯುವ ಮಿತಿಗಳು, ವ್ಯವಹಾರ ಶುಲ್ಕಗಳು ಮತ್ತು UPI ಮೂಲಕ ಹಣ ಪಡೆಯುವ ವಿಧಾನಗಳ ಮೇಲೆ ಪರಿಣಾಮ ಬೀರುತ್ತವೆ.
ಪ್ರೈವೇಟ್ ಕ್ಷೇತ್ರದ HDFC ಬ್ಯಾಂಕ್ ತಿಳಿಸಿರುವಂತೆ, ಈಗ ಎಟಿಎಂನಲ್ಲಿ ಯುಪಿಐ ಮೂಲಕ ಹಣ ತೆಗೆಯುವ ವ್ಯವಹಾರಗಳನ್ನು ಮಾಸಿಕ ಉಚಿತ ವ್ಯವಹಾರಗಳ ಮಿತಿಯಲ್ಲೇ ಸೇರಿಸಲಾಗುತ್ತದೆ. ಮೊದಲು ಇದು ಬೇರೆ ವಿಭಾಗವಾಗಿತ್ತು. ಈಗ ಗ್ರಾಹಕರು ಮಾಡುವ ಎಲ್ಲಾ ವ್ಯವಹಾರಗಳು ಒಟ್ಟುಗೂಡಿಸಿ ಲೆಕ್ಕ ಹಾಕಲಾಗುತ್ತದೆ.
ನಿಗದಿತ ಉಚಿತ ವ್ಯವಹಾರಗಳ ಮಿತಿಯನ್ನು ಮೀರಿದರೆ, ಪ್ರತಿ ವ್ಯವಹಾರಕ್ಕೆ ₹23 (ತೆರಿಗೆ ಹೊರತುಪಡಿಸಿ) ಶುಲ್ಕ ವಿಧಿಸಲಾಗುತ್ತದೆ. ಈಗಿರುವ ನಿಯಮ ಪ್ರಕಾರ, HDFC ಎಟಿಎಂನಲ್ಲಿ ತಿಂಗಳಿಗೆ 5 ಉಚಿತ ಹಣ ತೆಗೆಯುವ ಅವಕಾಶ ಇದೆ. ಇತರ ಬ್ಯಾಂಕ್ ಎಟಿಎಂ ಬಳಕೆ ಮಾಡಿದರೆ, ಮೆಟ್ರೋ ನಗರಗಳಲ್ಲಿ 3 ಮತ್ತು ನಾನ್-ಮೆಟ್ರೋ ಪ್ರದೇಶಗಳಲ್ಲಿ 5 ಉಚಿತ ವ್ಯವಹಾರಗಳ ಅವಕಾಶ ಇದೆ.
ಇನ್ನೊಂದು ಕಡೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಕೆಲವು ಡೆಬಿಟ್ ಕಾರ್ಡ್‌ಗಳ ದಿನಸಿ ಹಣ ತೆಗೆಯುವ ಮಿತಿಯನ್ನು ಪರಿಷ್ಕರಿಸಿದೆ. ಹೊಸ ನಿಯಮದ ಪ್ರಕಾರ, ಕಾರ್ಡ್ ಪ್ರಕಾರ ಅನುಗುಣವಾಗಿ ದಿನಕ್ಕೆ ₹50,000 ರಿಂದ ₹75,000 ವರೆಗೆ ಮಾತ್ರ ಹಣ ತೆಗೆಯಲು ಅವಕಾಶ ಇರುತ್ತದೆ. ಮೊದಲು ಕೆಲವು ಕಾರ್ಡ್‌ಗಳಲ್ಲಿ ₹1,00,000 ವರೆಗೆ ಹಣ ತೆಗೆಯುವ ಅವಕಾಶ ಇದ್ದರೂ, ಈಗ ಅದನ್ನು ಕಡಿತಗೊಳಿಸಲಾಗಿದೆ. ಈ ಕ್ರಮವನ್ನು ಬಳಕೆ ನಿಯಂತ್ರಣ ಮತ್ತು ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಲಾಗಿದೆ.
ಇದಲ್ಲದೆ, ಜಿಯೋ ಪೇಮೆಂಟ್ಸ್ ಬ್ಯಾಂಕ್ ಹೊಸ ಕ್ಯೂಆರ್ ಕೋಡ್ ಆಧಾರಿತ ಹಣ ತೆಗೆಯುವ ಸೌಲಭ್ಯವನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಯುಪಿಐ ಆಪ್ ಮೂಲಕ ಅನುಮೋದನೆ ನೀಡಿ, ಬ್ಯಾಂಕಿಂಗ್ ಪ್ರತಿನಿಧಿಗಳ ಬಳಿ ಹಣ ಪಡೆಯಬಹುದು.
ಈ ಬದಲಾವಣೆಗಳು ಡಿಜಿಟಲ್ ಬ್ಯಾಂಕಿಂಗ್ ಕಡೆಗೆ ಸಾಗುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತವೆ ಮತ್ತು ನಗದು ಬಳಕೆಯ ಮೇಲೆ ನಿಯಂತ್ರಣ ತರಲು ಸಹಾಯ ಮಾಡುತ್ತವೆ. ಗ್ರಾಹಕರು ತಮ್ಮ ಬ್ಯಾಂಕ್‌ನ ನಿಯಮಗಳನ್ನು ಪರಿಶೀಲಿಸಿ, ವ್ಯವಹಾರಗಳನ್ನು ಗಮನದಿಂದ ನಡೆಸುವುದು ಅಗತ್ಯ, ಇಲ್ಲವಾದರೆ ಹೆಚ್ಚುವರಿ ಶುಲ್ಕಗಳನ್ನು ಎದುರಿಸಬೇಕಾಗಬಹುದು.
ಇನ್ನು ಪ್ಯಾನ್ ಕಾರ್ಡ್ ಮಾಡಿಸಲು ಹಾಗೂ ವ್ಯವಹರಿಸಲು ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹಾಗಾದ್ರೆ ಹೊಸ ನಿಯಮಗಳೇನು?
ಡಿಓಬಿ ಸಾಬೀತಿಗೆ ಹೆಚ್ಚುವರಿ ಅಧಿಕೃತ ಪ್ರಮಾಣಪತ್ರ ಕೊಡಬೇಕು.
ಏಪ್ರಿಲ್ 1 ರಿಂದ ಹೆಚ್ಚು ವಿವರಗಳ ಹೊಸ ಅಪ್ಲಿಕೇಷನ್ ಫಾರಂ
ಜನ್ಮ ದಿನಾಂಕ ಸಾಬೀತಿಗೆ ಇನ್ನು ಆಧಾರ್’ ಒಂದೇ ಸಾಲೋದಿಲ್ಲ
ಪ್ಯಾನ್ ಅಗತ್ಯವಿರೋ ಆಸ್ತಿ ವಿವರ ಮಿತಿ 10 -20 ಲಕ್ಷ ರೂ.ಗೆ ಏರಿಕೆ
ಪಾರದರ್ಶಕತೆ ಕಾಯ್ದುಕೊಳ್ಳಲು ಪೇಪರ್ ಕೆಲಸಕ್ಕೆ ಕಡಿವಾಣ
ಈವರೆಗೆ ಪ್ಯಾನ್ ಕಾರ್ಡ್ ಮಾಡಿಸಲು ಕೇವಲ ಆಧಾರ್ ಕಾರ್ಡ್ ಸಾಕಾಗಿತ್ತು. ಆದರೆ ಏ.1ರಿಂದ ಹೊಸ ಕಾರ್ಡ್ ಮಾಡಿಸುವವರು ಹೊಸ ಆದಾಯ ತೆರಿಗೆ ನಿಯಮಗಳನ್ವಯ ತಮ್ಮ ಹುಟ್ಟಿದ ದಿನಾಂಕ ಸಾಬೀತಿಗೆ ಜನನ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, 10ನೇ ತರಗತಿ ಮಾರ್ಕ್ಸ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ಯಾವುದಾದರೂ ಒಂದನ್ನು ಆಧಾರ್ ಜೊತೆಗೆ ಲಗತ್ತಿಸಬೇಕು.
ಹಣಕಾಸು ವ್ಯವಹಾರ ಮಾಡುವಾಗ ಪ್ಯಾನ್ ಕಾರ್ಡ್‌ನ್ನು ಎಲ್ಲಿ ಮತ್ತು ಯಾವಾಗ ಬಳಸಬೇಕು ಎಂಬುದನ್ನೂ ಹೊಸ ಅದಾಯ ತೆರಿಗೆ ನಿಯಮಗಳು ಹೇಳಿವೆ. ಏಪ್ರಿಲ್ 1ರಿಂದ ಹೊಸ ಅಪ್ಲಿಕೇಷನ್ ಫಾರಂ ಬರಲಿದೆ. ಕೆಲವು ನಿರ್ದಿಷ್ಟ ಅರ್ಜಿದಾರರು ಹೆಚ್ಚು ವಿವರಗಳನ್ನು ಒದಗಿಸಬೇಕಾಗುತ್ತದೆ. ಹೊಸ ನಿಯಮಗಳನ್ವಯ, ವರ್ಷಕ್ಕೆ 10 ಲಕ್ಷ ರೂ.ವರೆಗೆ ನಗದು ಠೇವಣಿ/ಎಲ್‌ಡ್ರಾ ಮಾಡಲು, 20 ಲಕ್ಷ ರೂ.ವರೆಗಿನ ಆಸ್ತಿಪಾಸ್ತಿ ವ್ಯವಹಾರ (ಈವರೆಗೆ 10 ಲಕ್ಷ ಇತ್ತು), 5 ಲಕ್ಷ ರೂ.ಗಿಂತ ಹೆಚ್ಚಿನ ವಾಹನ ಖರೀದಿ ಮತ್ತು 1 ಲಕ್ಷ ರೂ.ಗಿಂತ ಹೆಚ್ಚಿನ ಹೋಟೆಲ್ ಬಿಲ್ ಪಾವತಿ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಅಗತ್ಯವಿದೆ ಎಂದು ಸೂಚಿಸಲಾಗಿದೆ. ಒಟ್ನಲ್ಲಿ ಈ ಎಲ್ಲಾ ಹೊಸ ನಿಯಮಗಳು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸುತ್ತಾ ಅಥವಾ ಲಾಭವಾಗುತ್ತಾ ಕಾದು ನೋಡಬೇಕಿದೆ.





















