Home Advertisement
Home ಸುದ್ದಿ ದೇಶ ಬಿಲ್ ಗೇಟ್ಸ್, ರತನ್ ಟಾಟಾ ಸಾಲಿನಲ್ಲಿ ಈಗ ನೀತಾ ಅಂಬಾನಿ

ಬಿಲ್ ಗೇಟ್ಸ್, ರತನ್ ಟಾಟಾ ಸಾಲಿನಲ್ಲಿ ಈಗ ನೀತಾ ಅಂಬಾನಿ

0
73

ಭುವನೇಶ್ಚರ್ (ಒಡಿಶಾ): ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆ ಆದ ನೀತಾ ಅಂಬಾನಿ ಅವರಿಗೆ ಪ್ರತಿಷ್ಠಿತ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (KISS) ಹ್ಯುಮಾನಿಟೇರಿಯನ್ ಪ್ರಶಸ್ತಿ 2025ಕ್ಕೆ ಭಾಜನರಾಗಿದ್ದಾರೆ.

ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಕ್ಯಾಂಪಸ್‌ನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನೊಬೆಲ್ ಪ್ರಶಸ್ತಿ ವಿಜೇತರಾದ ಶ್ರೀಲಂಕಾದ ಪ್ರೊ. ಮೋಹನ್ ಮುನಸಿಂಘೆ ಅವರು ಈ ಪ್ರಶಸ್ತಿಯನ್ನು ನೀತಾ ಅಂಬಾನಿಯವರಿಗೆ ನೀಡಿದರು.

ಈ ಸಂದರ್ಭದಲ್ಲಿ ಕೆಐಐಟಿ ಹಾಗೂ ಕೆಐಎಸ್ಎಸ್ ಸ್ಥಾಪಕರಾದ ಡಾ ಅಚ್ಯುತ ಸಮಂತ ಅವರು ಹಾಜರಿದ್ದರು. ಮಾನವೀಯ ದಯಾಪರತೆ ಉಪಕ್ರಮಗಳಿಗೆ ನೀತಾ ಅಂಬಾನಿ ಅವರು ಸಲ್ಲಿಸಿದ ಅಮೋಘ ಸೇವೆ- ಕೊಡುಗೆಗಳನ್ನು ಪರಿಗಣಿಸಲಾಗಿದೆ.

ಅದರಲ್ಲೂ ಶಿಕ್ಷಣ, ಆರೋಗ್ಯ ರಕ್ಷಣೆ, ಗ್ರಾಮೀಣ ಪರಿವರ್ತನೆ, ಮಹಿಳಾ ಸಬಲೀಕರಣ ಹಾಗೂ ಕ್ರೀಡಾ ಉತ್ತೇಜನಕ್ಕಾಗಿ ನೀತಾ ಅಂಬಾನಿ ಅವರು ರಿಲಯನ್ಸ್ ಫೌಂಡೇಷನ್ ಮೂಲಕ ಅದ್ಭುತವಾದ ಕೆಲಸಗಳನ್ನು ಮಾಡಿದ್ದಾರೆ ಹಾಗೂ ಮಾಡುತ್ತಾ ಇದ್ದಾರೆ ಎಂಬುದನ್ನು ಗುರುತಿಸಿ, ಗೌರವಿಸಲಾಗಿದೆ.

ಕಳೆದ ಹದಿನೆಂಟು ವರ್ಷಗಳಿಂದ ಈ ಹ್ಯುಮಾನಿಟೇರಿಯನ್ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದೆ. ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ವಿಶ್ವದಾದ್ಯಂತ ಮಾನವೀಯ ಕಾಳಜಿ ಕೆಲಸಗಳನ್ನು ಮಾಡುತ್ತಾ ಬಂದಿರುವುದನ್ನು ಗುರುತಿಸುತ್ತಾ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಗೋಲ್ಡ್ ಪ್ಲೇಟೆಡ್ ಟ್ರೋಫಿ ಹಾಗೂ ಸಾಧನೆಯ ಬಗೆಗಿನ ವಿವರಗಳು ಇರುವಂಥ ಫಲಕವನ್ನು ಪ್ರಶಸ್ತಿಯು ಒಳಗೊಂಡಿರುತ್ತದೆ.

ಈ ಹಿಂದೆ ದಲೈ ಲಾಮಾ, ಬಿಲ್ ಗೇಟ್ಸ್, ಮಾಮಾ ರಚೆಲ್ ರುಟೋ ಮತ್ತು ರತನ್ ಟಾಟಾ ಅವರಂಥ ಗಣ್ಯರಿಗೆ ಈ ಮಾನವೀಯ ಪ್ರಶಸ್ತಿಯ ಗೌರವ ಸಂದಿದೆ. ಇದೀಗ ಆ ಸಾಲಿನಲ್ಲಿ ನೀತಾ ಅಂಬಾನಿ ಅವರು ಸೇರ್ಪಡೆ ಆಗಿದ್ದಾರೆ.