Home Advertisement
Home ಸುದ್ದಿ ರಾಜ್ಯ Digital ಗಾದೆಗಳ ಟ್ರೆಂಡ್: ಹಾಸ್ಯದ ಹಿಂದೆ ಮರೆತ ನೋವು

Digital ಗಾದೆಗಳ ಟ್ರೆಂಡ್: ಹಾಸ್ಯದ ಹಿಂದೆ ಮರೆತ ನೋವು

0
100

ಯುದ್ಧ, ಬೆಲೆ ಏರಿಕೆ ಮತ್ತು ‘Digital ಗಾದೆಗಳು’: ಹಾಸ್ಯವೇ ಅಥವಾ ಸಂವೇದನಾಶೂನ್ಯತೆ?

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೊಸ ಟ್ರೆಂಡ್ ವೇಗವಾಗಿ ಹರಡುತ್ತಿದೆ. ಹಳೆಯ ಗಾದೆಗಳನ್ನು ಇಂದಿನ ಘಟನೆಗಳಿಗೆ ಹೊಂದಿಸಿ ವ್ಯಂಗ್ಯವಾಗಿ ಬರೆಯುವ “ಡಿಜಿಟಲ್ ಗಾದೆಗಳು” ಈಗ WhatsApp, Instagram ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿವೆ.

ಜನರು ತಮ್ಮ ದಿನನಿತ್ಯದ ಸಮಸ್ಯೆಗಳು, ರಾಜಕೀಯ ಘಟನೆಗಳು ಹಾಗೂ ಜಾಗತಿಕ ಬೆಳವಣಿಗೆಗಳನ್ನು ಹಳೆಯ ಗಾದೆಗಳ ಶೈಲಿಯಲ್ಲಿ ಬರೆದು ಹಂಚಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಅವು ಹಾಸ್ಯಭರಿತವಾಗಿದ್ದರೂ, ಕೆಲವೊಮ್ಮೆ ಸಮಾಜದ ಅಸಮಾಧಾನ ಮತ್ತು ಹತಾಶೆಯನ್ನೂ ಪ್ರತಿಬಿಂಬಿಸುತ್ತವೆ.

ಆದರೆ ಇತ್ತೀಚೆಗೆ ಹರಿದಾಡುತ್ತಿರುವ ಕೆಲವು ಗಾದೆಗಳು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ.

ಯುದ್ಧದ ಮಧ್ಯೆ ವ್ಯಂಗ್ಯ: ಜಗತ್ತಿನ ಹಲವು ಭಾಗಗಳಲ್ಲಿ ಯುದ್ಧದ ನೆರಳು ಗಟ್ಟಿಯಾಗುತ್ತಿದೆ. ವಿಶೇಷವಾಗಿ ಇರಾನ್ ಇಸ್ರೇಲ್-ಅಮೆರಿಕ ಯುದ್ದ ಹಿನ್ನೆಲೆ ಸಾವಿರಾರು ಜೀವಗಳು ಅಪಾಯದಲ್ಲಿವೆ. ನಗರಗಳು ನಾಶವಾಗುತ್ತಿವೆ, ಸಾಮಾನ್ಯ ಜನರ ಬದುಕು ಅಸ್ತವ್ಯಸ್ತವಾಗುತ್ತಿದೆ.

ಆದರೆ ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ವ್ಯಂಗ್ಯ ಗಾದೆಗಳು ಹರಿದಾಡುತ್ತಿವೆ: “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹತ್ತಿರದ ಯುದ್ಧ ಜೇಬಿಗೆ ಕತ್ತರಿ.”, “ಕುಂಬಾರನಿಗೆ ವರುಷ, ಕ್ಷಿಪಣಿಗೆ ನಿಮಿಷ.”, “ಇರಾನ್ ಕೊಬ್ಬಿದಷ್ಟೂ ಅಮೆರಿಕಾಗೆ ಲಾಭ…” “ಅಮೆರಿಕಾಕೆ ಚೆಲ್ಲಾಟ ಇರಾನಿಗೆ ಪ್ರಾಣ ಸಂಕಟ…” ಈ ಗಾದೆಗಳು ಯುದ್ಧದ ಭೀಕರತೆಯನ್ನು ವ್ಯಂಗ್ಯವಾಗಿ ಚಿತ್ರಿಸುತ್ತವೆ.

ಬೆಲೆ ಏರಿಕೆ ಮತ್ತು ಗಾದೆಗಳ ಮಳೆ: ದೇಶದಲ್ಲಿ ಎಲ್‌ಪಿಜಿ ಮತ್ತು ಪೆಟ್ರೋಲ್ ಬೆಲೆ ಏರಿಕೆಯ ನಡುವೆಯೂ ಜನರು ವ್ಯಂಗ್ಯ ಗಾದೆಗಳನ್ನು ರಚಿಸುತ್ತಿದ್ದಾರೆ: “ಹಾಸಿಗೆ ಇದ್ದಷ್ಟು ಕಾಲು ಚಾಚು, ಸಿಲಿಂಡರ್ ಇದ್ದಷ್ಟು ಅಡುಗೆ ಮಾಡು.”, “ಉಪ್ಪಿಗಿಂತ ರುಚಿಯಿಲ್ಲ, ಸಿಲಿಂಡರ್‌ಗಿಂತ ದುಬಾರಿಯಿಲ್ಲ.”, “ನೂರು ಸುಳ್ಳು ಹೇಳಿ ಒಂದು ಸಿಲಿಂಡರ್ ಬುಕ್ ಮಾಡು.” “ಸಿಲಿಂಡರ್ ಕಳ್ಳ ಅಂದ್ರೆ ಹೆಗಲು ಮುಟ್ ನೋಡಿಕೊಂಡನಂತೆ…”, “ಸಿಲಿಂಡರ್ ಇದ್ದವನೇ ದೊಡ್ಡಪ್ಪ…” “ಪೆಟ್ರೋಲ್ ಬೆಳ್ಳಿ ಸಿಲಿಂಡರ್ ಬಂಗಾರ…” ಈ ಗಾದೆಗಳು ಸಾಮಾನ್ಯ ಜನರ ಸಂಕಷ್ಟವನ್ನು ವ್ಯಂಗ್ಯ ರೂಪದಲ್ಲಿ ವ್ಯಕ್ತಪಡಿಸುತ್ತವೆ.

ಹಾಸ್ಯಕ್ಕೂ ಮಿತಿ ಬೇಕು: ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿಗೆ ದೊಡ್ಡ ವೇದಿಕೆ. ಆದರೆ ಯುದ್ಧ ಅಥವಾ ಆರ್ಥಿಕ ಸಂಕಷ್ಟದಂತಹ ಗಂಭೀರ ಸಂದರ್ಭಗಳನ್ನು ಕೇವಲ ವೈರಲ್ ಆಗುವ ಉದ್ದೇಶದಿಂದ ಹಾಸ್ಯಕ್ಕೆ ಬಳಸುವುದು ಸಂವೇದನಾಶೂನ್ಯತೆಯ ಲಕ್ಷಣವಾಗಬಹುದು ಎಂಬ ಅಭಿಪ್ರಾಯವೂ ಹೆಚ್ಚುತ್ತಿದೆ.

ಯುದ್ಧದಿಂದ ಸಾವಿರಾರು ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಳ್ಳುತ್ತಿವೆ. ಬೆಲೆ ಏರಿಕೆಯಿಂದ ಲಕ್ಷಾಂತರ ಕುಟುಂಬಗಳ ಅಡುಗೆಮನೆ ಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ವ್ಯಂಗ್ಯ ಬರಹಗಳು ಕೆಲವರಿಗೆ ನೋವುಂಟು ಮಾಡಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿ: ಸಾಮಾಜಿಕ ಜಾಲತಾಣ ಬಳಕೆದಾರರು ಕನಿಷ್ಠ ಮೂರು ಅಂಶಗಳನ್ನು ಗಮನದಲ್ಲಿಡಬೇಕು:

ಸಂವೇದನೆ (Empathy): ಸಂಕಷ್ಟದಲ್ಲಿರುವವರ ನೋವನ್ನು ಅರ್ಥಮಾಡಿಕೊಳ್ಳುವುದು.

ಜವಾಬ್ದಾರಿ: ಸುಳ್ಳು ಮಾಹಿತಿ ಅಥವಾ ಗಾಳಿ ಸುದ್ದಿಗಳನ್ನು ಹರಡದಿರುವುದು.

ಸಹಕಾರ: ಸಂಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡುವ ಮನೋಭಾವ ಬೆಳೆಸುವುದು.

ಗಾದೆಗಳು ನಮ್ಮ ಸಂಸ್ಕೃತಿಯ ಜ್ಞಾನಸಂಪತ್ತಾಗಿದೆ. ಅವು ಜೀವನಕ್ಕೆ ಮಾರ್ಗದರ್ಶನ ನೀಡಬೇಕು; ಯಾರಿಗೂ ನೋವುಂಟು ಮಾಡುವ ಅಸ್ತ್ರವಾಗಬಾರದು.