Home Advertisement
Home ನಮ್ಮ ಜಿಲ್ಲೆ ಬೆಂಗಳೂರು ರೈತರ ಬಾಕಿ ಹಣ ಬಿಡುಗಡೆ ಮಾಡಿ: ಸಿಎಂಗೆ ಆರ್.ಅಶೋಕ್ ಆಗ್ರಹ

ರೈತರ ಬಾಕಿ ಹಣ ಬಿಡುಗಡೆ ಮಾಡಿ: ಸಿಎಂಗೆ ಆರ್.ಅಶೋಕ್ ಆಗ್ರಹ

0
256

15 ದಿನದಲ್ಲಿ ಪಾವತಿ ನಿಯಮ ಜಾರಿಗೆ ತರಲಿ: ಸರ್ಕಾರಕ್ಕೆ ಆರ್.ಅಶೋಕ್ ಒತ್ತಾಯ

ಬೆಂಗಳೂರು: ಕಬ್ಬು ಪೂರೈಸಿದ ಬಳಿಕ 15 ದಿನಗಳೊಳಗೆ ರೈತರಿಗೆ ಬಿಲ್ ಪಾವತಿಸಬೇಕು ಎಂಬ ನಿಯಮ ಇದ್ದರೂ, ರಾಜ್ಯದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿಸುವಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್‌ ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘ಸಂಯುಕ್ತ ಕರ್ನಾಟಕ’ದಲ್ಲಿ ಪ್ರಕಟವಾದ ಪತ್ರಕರ್ತ ವಿಲಾಸ ಜೋಶಿ ಅವರ ವರದಿಯನ್ನು ಹಂಚಿಕೊಂಡು ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ಸುಮಾರು ₹1,554 ಕೋಟಿ ಕಬ್ಬು ಬಿಲ್ ಬಾಕಿ ಉಳಿದಿದೆ ಎಂದು ಆರೋಪಿಸಿದ್ದಾರೆ.

ವಿಶೇಷವಾಗಿ ಬೆಳಗಾವಿ ಜಿಲ್ಲೆ ಒಂದರಲ್ಲೇ 2025–26ರ ಸಕ್ಕರೆ ಹಂಗಾಮಿನ ಬಳಿಕವೂ ರೈತರಿಗೆ ಸಾವಿರಾರು ಕೋಟಿ ರೂಪಾಯಿ ಪಾವತಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ ಕಬ್ಬು ಬೆಳೆಗಾರರು ಮತ್ತೊಮ್ಮೆ ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರ ತಕ್ಷಣ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿ ರೈತರಿಗೆ ಬಾಕಿ ಇರುವ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಟೀಕಿಸಿರುವ ಅವರು, ರೈತರ ಬದುಕು ಸುಧಾರಿಸುವ ಬದಲು ಸರ್ಕಾರ ರಾಜಕೀಯ ಲೆಕ್ಕಾಚಾರಗಳಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಬಾಕಿ ಹಣ ಬಿಡುಗಡೆ ಮಾಡುವಂತೆ ಕಾರ್ಖಾನೆಗಳಿಗೆ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.