ನಂಜನಗೂಡು (ಮೈಸೂರು ಜಿಲ್ಲೆ): ತಾಲೂಕಿನ ನಂಜನಗೂಡು ಸಮೀಪದ ನಗರ್ಲೆ ಗ್ರಾಮದಲ್ಲಿ ನವಜಾತ ಗಂಡು ಮಗುವಿನ ಶವ ಚಿಕ್ಕ ನಾಲೆಯಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿರುವ ಶ್ರೀ ಮಾಳೀಗೇಶ್ವರಿ ದೇವಾಲಯದ ಸಮೀಪ ಹಾದು ಹೋಗುವ ಚಿಕ್ಕ ನಾಲೆಯಲ್ಲಿ ಮಗುವಿನ ಮೃತದೇಹ ಕಂಡುಬಂದಿದ್ದು, ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಬಿಳಿಗೆರೆ ಪೊಲೀಸ್ ಠಾಣೆಯ ವ್ಯಾಪ್ತಿಯ ಪಿಎಸ್ಐ ಕರಿಬಸಪ್ಪ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿ ಬಳಿಕ ಮಗುವನ್ನು ನಾಲೆಗೆ ಎಸೆದು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಡಿಪಿಒ ರಾಘವೇಂದ್ರ ಕೂಡ ಸ್ಥಳಕ್ಕೆ ತೆರಳಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದರು. ನಂತರ ಮಗುವಿನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆ ಕುರಿತು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ತಾಯಿ ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಆಸ್ಪತ್ರೆಗಳು ಹಾಗೂ ಗ್ರಾಮಗಳಲ್ಲಿ ಇತ್ತೀಚೆಗೆ ಹೆರಿಗೆಗೊಂಡ ಮಹಿಳೆಯರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವೂ ನಡೆಯುತ್ತಿದೆ.
ಈ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಹುಟ್ಟಿಸಿದ್ದು, ನವಜಾತ ಶಿಶುವಿನ ಸಾವಿನ ನಿಜವಾದ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.























