ಭಟ್ಕಳ(ಉತ್ತರ ಕನ್ನಡ): ವೈಯಕ್ತಿಕ ಕಾರಣಗಳಿಂದಾಗಿ ಕೆಲವು ಕಾಲ ರಾಜಕೀಯ ರಂಗದಿಂದ ದೂರವಿದ್ದ ಪ್ರಖರ ಮಾತುಗಾರ, ಹಿಂದೂತ್ವವಾದಿ ಅನಂತಕುಮಾರ ಹೆಗಡೆ ಮತ್ತೆ ರಂಗಪ್ರವೇಶ ಮಾಡಿದ್ದಾರೆ. ಅದೂ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಲಾಗಿರುವ ಭಟ್ಕಳದಲ್ಲಿ ಹೆಗಡೆ ರಾಜಕೀಯದ ಬಗೆಗೆ ಮಾತನಾಡದಿದ್ದರೂ ಹಿಂದೂತ್ವದ ಶ್ರೇಷ್ಠತೆಯನ್ನು ಸಾರಿ ಹೇಳಿದರು.
ಭಟ್ಕಳದಲ್ಲಿ ಭಾನುವಾರ ಹಿಂದೂ ಸಮಾಜೋತ್ಸವ ಸಮಿತಿ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಪ್ರಖರ ಭಾಷಣ ಮಾಡಿದರು.
ಆರ್‌ಎಸ್‌ಎಸ್‌ನ್ನು ಮುಟ್ಟಿ ನೋಡೋಣ…: ಹಿಂದೂ ಸಮಾಜದ ಜಾಗೃತಿ ಇಂದು ವಿಶ್ವದೆಲ್ಲೆಡೆ ಪಸರಿಸಿದ್ದರೆ ಅದಕ್ಕೆ ಆರ್‌ಎಸ್‌ಎಸ್ ಕಾರಣ. ಪ್ರಪಂಚದೆಲ್ಲೆಡೆ ಆರ್‌ಎಸ್‌ಎಸ್‌ಗೆ ಮನ್ನಣೆ ಕೊಡುತ್ತಿರುವ ಈ ಕಾಲಘಟ್ಟದಲ್ಲಿ ಕೆಲವರು ಆರ್‌ಎಸ್‌ಎಸ್ ಹೊಸಕಿ ಹಾಕುತ್ತೇವೆ, ಮಟ್ಟ ಹಾಕುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಇಂತಹವರೆಲ್ಲ ಮಿಣುಕು ಹುಳುಗಳಿದ್ದ ಹಾಗೆ. ಜಗತ್ತಿನ ಯಾರಿಗೂ ಕೂಡ ಹಿಂದೂ ಸಮಾಜವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಅಂತಹ ಯಾರಿಗಾದರೂ ಅಂತಹ ಧಮ್ಮಿದ್ದರೆ ಆರ್‌ಎಸ್‌ಎಸ್‌ನ್ನು ಮುಟ್ಟಿ ನೋಡೋಣ ಎಂದು ಎಚ್ಚರಿಕೆಯ ಸವಾಲು ಹಾಕಿದರು.
ಭಾರತವನ್ನು ದುರ್ಬಲಗೊಳಿಸಬೇಕೆಂಬ ಹುನ್ನಾರ ನಡೆಯುತ್ತಿದ್ದರೂ ಕಂಡು ಕೇಳರಿಯದ ರೀತಿಯಲ್ಲಿ ದೇಶ ಮುನ್ನಡೆಯುತ್ತಿದೆ. ಇಡೀ ಜಗತ್ತೇ ಭಾರತದ ಮುಂದೆ ತಲೆಬಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿದರು. ಹಿಂದೂಗಳಿದ್ದಲ್ಲಿ ಶಾಂತಿಯಿದೆ. ಜಗತ್ತಿನ ಯಾವ ಇಸ್ಲಾಂ ದೇಶದಲ್ಲಿ ಶಾಂತಿಯಿದೆ ಹೇಳಿ. ಬ್ರಾಹ್ಮಣ್ಯದ ಬಗ್ಗೆ ಇಂದು ಬಹು ಚರ್ಚೆ ನಡೆಯುತ್ತಿದೆ. ಮನುಸ್ಮೃತಿ ಓದಿದವರು ಯಾರೂ ಚರ್ಚೆ ಮಾಡುತ್ತಿಲ್ಲ. ಜಾತಿಯಿಂದ ಯಾರನ್ನೂ ಗುರುತಿಸಿಲ್ಲ, ಅವರ ಯೋಗ್ಯತೆಯಿಂದ ಗುರುತಿಸಲಾಗಿದೆ ಎಂದರು.
ರಾಜಕೀಯದ ಮರು ಪ್ರವೇಶದ ಬಗ್ಗೆ ಜನ ಮಾತಾಡುತ್ತಿದ್ದರೂ ಹೆಗಡೆ ಸುಮಾರು 45 ನಿಮಿಷದ ನಿರರ್ಗಳ ಭಾಷಣದಲ್ಲಿ ಎಲ್ಲಿಯೂ ರಾಜಕೀಯದ ಕುರಿತು ಮಾತನಾಡಲಿಲ್ಲ. ಕೇವಲ ಹಿಂದುತ್ವ, ಆರ್‌ಎಸ್‌ಎಸ್ ಬಗ್ಗೆ ಮಾತ್ರ ಮಾತನಾಡಿದರು. ಭಾಷಣ ಮುಗಿಸಿ ನಿರ್ಗಮಿಸುವ ವೇಳೆ ಮುಂದಿನ ಮುಖ್ಯಮಂತ್ರಿ ಅನಂತಕುಮಾರ್ ಹೆಗಡೆ ಎನ್ನುವ ಘೋಷಣೆ ಕೇಳಿ ಬಂತು.























