Home Advertisement
Home ಕ್ರೀಡೆ T20 World Cup: ಭಾರತ vs ನ್ಯೂಜಿಲೆಂಡ್‌ ಫೈನಲ್‌ ಫೈಟ್‌

T20 World Cup: ಭಾರತ vs ನ್ಯೂಜಿಲೆಂಡ್‌ ಫೈನಲ್‌ ಫೈಟ್‌

0
84

ಅಹಮದಾಬಾದ್: ಯಾರು ಬಲಿಷ್ಠ, ಯಾವ ತಂಡ ನೆಚ್ಚಿನ ತಂಡ ಎಂಬುದನ್ನೇ ಹೇಳಲಾಗದಂತಹ ಸನ್ನಿವೇಶ. ಒಬ್ಬರನ್ನೊಬ್ಬರು ಕಾಲೆಳೆದಾಡುವಂತಹ ಚಾಣಾಕ್ಷರು. ಅತ್ತ ನ್ಯೂಜಿಲೆಂಡ್ ಸೋಲುತ್ತೆ ಎಂದು ಸುಲಭವಾಗಿ ಹೇಳಲು ಸಾಧ್ಯವಿಲ್ಲ. ಅದೇ ರೀತಿ ಭಾರತವೂ ಗೆದ್ದು ಬಿಡುತ್ತೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಲು ಸಾಧ್ಯವಿಲ್ಲ. ಹಾಗಾಗಿ, ಇಂದು ನಡೆಯುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹೊರಹೊಮ್ಮುವ ವಿಜೇತರನ್ನು ಪಂದ್ಯದ ಬಳಿಕವೇ ಕಣ್ತುಂಬಿಕೊಳ್ಳಬಹುದು. ವಿಶ್ವ ಚುಟುಕು ಸಾಮ್ರಾಟ ಪಟ್ಟವನ್ನು ಭಾರತ ಉಳಿಸಿಕೊಳ್ಳುವುದೋ ಅಥವಾ ಮೊದಲ ಬಾರಿಗೆ ಆ ಸಿಂಹಾಸನವನ್ನು ಕಿವೀಸ್ ಏರುವುದೋ ಎಂಬ ಕುತೂಹಲಕ್ಕೆ ಪಂದ್ಯವೇ ಉತ್ತರ ನೀಡಬೇಕಾಗಿದೆ.

ಹೌದು, ಟಿ20 ವಿಶ್ವಕಪ್‌ನಲ್ಲಿ ಈವರೆಗೂ ಎರಡು ಬಲಿಷ್ಠ ತಂಡಗಳಾಗಿ ಕಾಣಿಸಿಕೊಂಡಿರುವ ಅತಿಥೇಯ ಭಾರತ ತಂಡ ಹಾಗೂ ನ್ಯೂಜಿಲೆಂಡ್, ಇಂದು ಅಂತೂ ಇಂತೂ ತಮ್ಮಲ್ಲಿ ಯಾರು ಪ್ರಬಲ ಎಂಬುದನ್ನು ತೋರಿಸಲೆಂದೇ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಖಾಡ ಸಿದ್ಧ ಪಡಿಸಿಕೊಂಡಿದ್ದಾರೆ.

ಇದೇ ವರ್ಷದ ಜನವರಿಯಲ್ಲಿ ಟಿ20 ಸರಣಿಯಲ್ಲಿ ಗೆದ್ದಿದ್ದ ಭಾರತ, ಬಲಿಷ್ಠವಾಗಿ ಕಾಣಿಸಿಕೊಳ್ಳುತ್ತಿದ್ದರೂ, 2021ರ ಬಳಿಕ ಟಿ20 ವಿಶ್ವಕಪ್ ಫೈನಲ್‌ಗೇರಿರೋ ನ್ಯೂಜಿಲೆಂಡ್ ಈ ಬಾರಿ ರನ್ನರ್‌ಅಪ್ ಆಗಲು ಬಯಸುತ್ತಿಲ್ಲ. ಈವರೆಗೂ ಈ ಟೂರ್ನಿಯಲ್ಲಿ ಏಕಮೇವವಾದಂತಹ ಉದಾಹರಣೆ ಪಂದ್ಯಗಳಿಲ್ಲ. ರೋಚಕ ಹಂತಗಳ ಮೂಲಕವೇ ಈ ವಿಶ್ವಕಪ್ ಅಭಿಮಾನಿಗಳನ್ನು ರಂಜಿಸಿದೆ. ಈಗ ಇದೇ ರೀತಿ ಫೈನಲ್ ಪಂದ್ಯವೂ ಕೊನೆ ಎಸೆತದವರೆಗೂ ಕುತೂಹಲವನ್ನು ಹಿಡಿದಿಟ್ಟಿರುತ್ತದೆ ಎಂಬ ನಿರೀಕ್ಷೆ ಭಾರತೀಯ ಅಭಿಮಾನಿಗಳಲ್ಲಂತೂ ಇದೆ.

ಉಭಯ ತಂಡಗಳನ್ನು ಒಮ್ಮೆಗೆ ಅವಲೋಕಿಸಿದ್ರೆ, ಎರಡೂ ತಂಡಗಳ ಬ್ಯಾಟರ್‌ಗಳು ಅಬ್ಬರಿಸಿದ್ದಾರೆ. ಭಾರತದ ಪರ ಇಶನ್ ಕಿಶನ್, ಸಂಜು ಸ್ಯಾಮ್ಸನ್, ಶಿವಂ ದುಬೆ ಮಿಂಚಿನಂತಹ ಬ್ಯಾಟಿಂಗ್ ಮಾಡಿದ್ದರೆ, ಕಿವೀಸ್‌ನ ಫಿನ್ ಅಲೆನ್ ಟಿ20 ವಿಶ್ವಕಪ್‌ನಲ್ಲೇ ವೇಗದ ಶತಕ ದಾಖಲಿಸಿದ್ದಾರೆ. ಟಿಮ್ ಸೈಫರ್ಟ್ ಕೂಡ ರನ್‌ಮಳೆ ಸುರಿಸಿದ್ದಾರೆ. ಇನ್ನು ಬೌಲರ್‌ಗಳ ವಿಚಾರದಲ್ಲಿ ವರುಣ್ ಚಕ್ರವರ್ತಿ ಹಾಗೂ ಅತ್ತ ರಚಿನ್ ರವೀಂದ್ರ ಮಧ್ಯೆ ಪೈಪೋಟಿಯಿದೆ. ಆದ್ರೆ, ವರುಣ್ ದುಬಾರಿಯಾಗುತ್ತಿರುವುದು ಕೊಂಚ ಚಿಂತೆಯನ್ನು ಹೆಚ್ಚಿಸಿದೆ. ಆದ್ರೆ, ಕಳೆದ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಎಕಾನಮಿ ಬೌಲಿಂಗ್ ನ್ಯೂಜಿಲೆಂಡ್ ರನ್‌ವೇಗಕ್ಕೆ ಕಡಿವಾಣ ಹಾಕಬೇಕಿದೆ.

ಕೆಂಪು-ಕಪ್ಪು ಮಿಶ್ರ ಪಿಚ್: ಅಹಮದಾಬಾದ್‌ನ ನರೇಂದ್ರ ಪಿಚ್ ಅನ್ನು ಕೊಂಚ ಬದಲಿಸಲಾಗಿದೆ. ಭಾರತೀಯ ಆಟಗಾರರ ಮನವಿಯಂತೆಯೇ ಕೆಂಪು ಹಾಗೂ ಕಪ್ಪು ಬಣ್ಣ ಮಿಶ್ರಣದಿಂದ ಕೂಡಿರುವ ಪಿಚ್ ಮಾಡಲಾಗಿದ್ದು, ಚೆಂಡು ಹೆಚ್ಚು ಪುಟಿದೇಳಲಿದೆ. ಆದರೆ, ಈ ಸ್ಟೇಡಿಯಂನಲ್ಲಿ ಭಾರತ ಪ್ರಮುಖವಾಗಿ 2023ರ ಏಕದಿನ ವಿಶ್ವಕಪ್ ಫೈನಲ್, 2024ರ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೋತಿದೆ. ಅಲ್ಲದೇ, ಈ ಟೂರ್ನಿಯಲ್ಲಿ ಭಾರತ ಸೋತಿರುವ ಏಕೈಕ ಪಿಚ್ ಕೂಡ ಇದೇ. ಹಾಗಾಗಿ, ಭಾರತಕ್ಕೆ ಈ ಸ್ಟೇಡಿಯಂನಲ್ಲಿ ಮತ್ತೊಂದು ಐಸಿಸಿ ಟೂರ್ನಿಯ ಫೈನಲ್ ಸೋಲು ಎದುರಾಗಲಿದೆಯೇ ಎಂಬ ಆತಂಕ ಎಲ್ಲರಲ್ಲಿದೆ.

ಐಸಿಸಿ ದಿಗ್ಗಜರ ಮುಖಾಮುಖಿ: ಇಂದು ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೆಣಸಾಡುತ್ತಿರುವ ಇಂಡೋ-ಕಿವೀಸ್ ಐಸಿಸಿ ಟೂರ್ನಿಗಳಲ್ಲಿ ಬಲಿಷ್ಠ ತಂಡಗಳಾಗಿವೆ. ಆದ್ರೆ, 2000ರಲ್ಲಿ ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ, ಈವರೆಗೂ ಐಸಿಸಿ ಟೂರ್ನಿ ಗೆದ್ದಿಲ್ಲ. 2019ರ ಏಕದಿನ ವಿಶ್ವಕಪ್, 2021ರ ಟಿ20 ವಿಶ್ವಕಪ್ ಫೈನಲ್, 2021ರ ಟೆಸ್ಟ್ ಚಾಂಪಿಯನ್‌ಶಿಪ್ ಅಲ್ಲದೇ 2024ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲೂ ಮುಗ್ಗರಿಸಿದೆ. ಅದೇ ರೀತಿ ಭಾರತ ಕಳೆದ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಲ್ಲದೇ, ಸತತ 2ನೇ ಬಾರಿ ಟಿ20 ವಿಶ್ವಕಪ್‌ನ ಫೈನಲ್‌ಗೇರಿದೆ. ಹಾಗಾಗಿ, ಈವೆರಡೂ ಎರಡು ಮುಖದ ಒಂದೇ ನಾಣ್ಯದಂತಿದೆ.

ಸಂಬಾವ್ಯ ತಂಡ ಇಂತಿದೆ
ಭಾರತ:
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಷ್ದೀಪ್ ಸಿಂಗ್, ಬುಮ್ರಾ, ವರುಣ್ ಚಕ್ರವರ್ತಿ/ಕುಲ್ಮದೀಪ್ ಯಾದವ್

ನ್ಯೂಜಿಲೆಂಡ್: ಸೀಫರ್ಟ್, ಫಿನ್ ಅಲೆನ್, ರಚಿನ್ , ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್, ಸ್ಯಾಂಟ್ನರ್, ಮೆಕ್‌ಕೊಂಚಿ, ಜಿಮ್ಮಿ ನೀಶಮ್/ ಡಫಿ, ಹೆನ್ರಿ, ಲಾಕಿ ಫರ್ಗುಸನ್