ಹುಬ್ಬಳ್ಳಿ: ಹೋಳಿ ಹಬ್ಬದ ಅಂಗವಾಗಿ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಸಮಿತಿಯ ವತಿಯಿಂದ ಮಾರ್ಚ್ 5ರಂದು ನಗರದ ಐತಿಹಾಸಿಕ ಮೂರುಸಾವಿರ ಮಠ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಭವ್ಯ ಜಗ್ಗಲಗಿ ಹಬ್ಬ ಜರುಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ್ದು, ಕಳೆದ 14 ವರ್ಷಗಳಿಂದ ಜಗ್ಗಲಗಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಹೋಳಿ ಹಬ್ಬವನ್ನು ಪ್ರೋತ್ಸಾಹಿಸುವುದು ಹಾಗೂ ಹಿಂದೂ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಈ ಉತ್ಸವವನ್ನು ನಡೆಸಲಾಗುತ್ತಿದೆ ಎಂದರು. ಚರ್ಮವಾದ್ಯ ನುಡಿಸುವ ಕಲಾವಿದರಿಗೆ ಇದು ಉತ್ತಮ ವೇದಿಕೆಯಾಗಿದ್ದು, ಉತ್ತರ ಕರ್ನಾಟಕದ ಜಾನಪದ ಕಲೆಗಳಿಗೆ ಪುನರುಜ್ಜೀವನ ನೀಡುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಕೇಂದ್ರ ಸಚಿವರಿಂದ ಚಾಲನೆ: ಹಬ್ಬಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಲಿದ್ದಾರೆ. ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದ್ದು, ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗಿ: ಈ ಬಾರಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಒಟ್ಟು 400 ಜಗ್ಗಲಗಿ ಕಲಾವಿದರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಇಚಲಕರಂಜಿಯ ಜೀವಿಕಾ ಇವೆಂಟ್ಸ್ ವಾದ್ಯ ಸಂಸ್ಕಾರ ಡೋಲತಾಷಾ ತಂಡದ 50 ಮಂದಿ, ಹುಬ್ಬಳ್ಳಿಯ ನ್ಯೂ ಆಲ್ ಮ್ಯೂಸಿಕಲ್ ಸ್ಟಾಪ್ ತಾಷಾರಾಮ್ ಡೋಲ್ ಕಂಪನಿ ಹಾಗೂ ಸೂಪರ್ ಕಿಂಗ್ ನಾಸಿಕ್ ಡೋಲ್ ತಂಡದ 40 ಮಂದಿ ಸದಸ್ಯರು ಭಾಗವಹಿಸಲಿದ್ದಾರೆ.
ಇದಲ್ಲದೆ ಉಡುಪಿ ಕಾಡು-ಬೆಟ್ಟ ಪ್ರದೇಶದಿಂದ ಹುಲಿ ಕುಣಿತ, ಹನುಮಾನ, ನಂದಿ, ನಾಗಾಸಾಧುಗಳೊಂದಿಗೆ ಪರಮೇಶ್ವರ ನರಸಿಂಹ ವೇಷಭೂಷಣಗಳ ಕಲಾವಿದರು ಸೇರಿ ಒಟ್ಟು ಸುಮಾರು 1,000ಕ್ಕೂ ಅಧಿಕ ಕಲಾವಿದರು ಉತ್ಸವದ ವೈಭವ ಹೆಚ್ಚಿಸಲಿದ್ದಾರೆ.
ಮೆರವಣಿಗೆ ಮಾರ್ಗ: ಮೂರುಸಾವಿರ ಮಠದಿಂದ ಆರಂಭವಾಗುವ ಮೆರವಣಿಗೆ ಎಸ್.ಟಿ. ಭಂಡಾರಿ ರಸ್ತೆ, ವಿಕ್ಟೋರಿಯಾ ರಸ್ತೆ, ಕೊಪ್ಪಿಕರ್ ರಸ್ತೆ, ಬಾನಿ ಓಣಿ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಗಣೇಶ ಪೇಟ್ ವೃತ್ತ, ಮರಾಠಗಲ್ಲಿ, ಶಿವಾಜಿ ಚೌಕ್, ಬ್ರಾಡ್ ವೇ, ದುರ್ಗದ ಬಯಲು, ಬೆಳಗಾವಿ ಗಲ್ಲಿ, ಪೆಂಡಾರ್ ಗಲ್ಲಿ, ತುಳಜಾ ಭವಾನಿ ವೃತ್ತ ಮೂಲಕ ಮಠಕ್ಕೆ ಮರಳಲಿದೆ.
ಸಾಂಸ್ಕೃತಿಕ ಪುನರುಜ್ಜೀವನದ ಸಂಕೇತ: ಆಧುನಿಕ ಡಿಜೆ ಸಂಸ್ಕೃತಿಯ ಪ್ರಭಾವದಿಂದ ಮರೆಯಾಗುತ್ತಿದ್ದ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕಲೆಗಳನ್ನು ಮತ್ತೆ ಮುನ್ನೆಲೆಗೆ ತರುವ ಉದ್ದೇಶದಿಂದ ಸುಮಾರು 14 ವರ್ಷಗಳ ಹಿಂದೆ ಈ ಹಬ್ಬ ಆರಂಭಿಸಲಾಯಿತು. ಜಗ್ಗಲಗಿ ಎಂಬುದು ಒಬ್ಬ ಮನುಷ್ಯನ ಎತ್ತರದಷ್ಟಿರುವ ಬೃಹತ್ ಚರ್ಮವಾದ್ಯವಾಗಿದ್ದು, ನೆಲದ ಮೇಲೆ ಉರುಳಿಸುತ್ತಾ ವಿಶಿಷ್ಟ ಲಯದಲ್ಲಿ ನುಡಿಸಲಾಗುತ್ತದೆ. ಗ್ರಾಮ ದೇವತೆಗಳ ಆರಾಧನೆಗೆ ಸಂಬಂಧಿಸಿದ ಈ ವಾದ್ಯಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ನಂಟು ಇದೆ.
ಧಾರವಾಡ ಜಿಲ್ಲೆಯ ಸುಳ್ಳ, ಬ್ಯಾಹಟ್ಟಿ, ಶಿವಳ್ಳಿ ಮುಂತಾದ ಹಳ್ಳಿಗಳ ಕಲಾವಿದರಿಗೆ ನಗರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಈ ಹಬ್ಬ ದೊಡ್ಡ ವೇದಿಕೆಯಾಗಿದೆ.





















