Home Advertisement
Home ಕ್ರೀಡೆ T20 WorldCup: ಸೆಮೀಸ್‌ಗೆ ಭಾರತ-ವಿಂಡೀಸ್‌ ಅಂದರ್-ಬಾಹರ್ ಆಟ

T20 WorldCup: ಸೆಮೀಸ್‌ಗೆ ಭಾರತ-ವಿಂಡೀಸ್‌ ಅಂದರ್-ಬಾಹರ್ ಆಟ

0
39

ಕೋಲ್ಕತಾ: ಟಿ20 ವಿಶ್ವಕಪ್‌ನ ಸೆಮಿಫೈನಲ್ ರೇಸ್ ಇಂದು ಅಂತ್ಯವಾಗಲಿದೆ. ಈಗಾಗಲೇ, ಸೂಪರ್ 8ರ ಹಂತದಲ್ಲಿ ಕಾಣಿಸಿಕೊಂಡ 8 ತಂಡಗಳ ಪೈಕಿ 3 ತಂಡಗಳು ಸೆಮೀಸ್‌ನಲ್ಲಿ ಜಾಗ ಗಿಟ್ಟಿಸಿದ್ದು, 3 ತಂಡಗಳು ಹೊರಬಿದ್ದಿವೆ. ಇನ್ನುಳಿದ ಎರಡು ತಂಡಗಳಾದ ಹಾಲಿ ಚಾಂಪಿಯನ್ಸ್ ಭಾರತ ಹಾಗೂ ಮಾಜಿ ಚಾಂಪಿಯನ್ ವೆಸ್ಟ್ಇಂಡೀಸ್ ಸೆಮೀಸ್‌ನಲ್ಲಿ ಬಾಕಿ ಉಳಿದುಕೊಂಡಿರುವ 4ನೇ ಸ್ಥಾನವನ್ನು ದಕ್ಕಿಸಿಕೊಳ್ಳಲು ಸಮರಭ್ಯಾಸವನ್ನು ಮುಗಿಸಿ, ಪಂದ್ಯಕ್ಕಾಗಿ ತಮ್ಮಮ್ಮ ರಣತಂತ್ರಗಳನ್ನು ಹೆಣೆದು ಸಿದ್ಧವಾಗಿ ನಿಂತಿವೆ.

ಈ ಟಿ20 ವಿಶ್ವಕಪ್‌ನಲ್ಲಿ ಆರಂಭದಿಂದಲೂ ವಿಭಿನ್ನ ಗುಂಪುಗಳಲ್ಲಿ ಕಾಣಿಸಿಕೊಂಡ ಈ ತಂಡಗಳು, ಈಗ ಸೆಮಿಫೈನಲ್‌ಗೂ ಮುನ್ನ ಕ್ವಾರ್ಟರ್ ಫೈನಲ್‌ನಂತೆ ಬಿಂಬಿತಗೊಂಡಿರೋ ಪಂದ್ಯದಲ್ಲಿ ಗುರುತಿಸಿಕೊಂಡಿರುವುದು ಅಭಿಮಾನಿಗಳನ್ನು ಈಡನ್ ಗಾರ್ಡನ್ಸ್ ಮೈದಾನಕ್ಕೆ ತಂದು ಕೂರಿಸಿದೆ.

ಯಾರೂ ಸಹ ನಿರೀಕ್ಷಿಸದಂತಹ ಬೆಳವಣಿಗೆಗಳಲ್ಲಿ ಸೂಪರ್ 8ರ ಹಂತದ ಕೊನೆ ಪಂದ್ಯದವರೆಗೂ ಸೆಮೀಸ್ ತಂಡಗಳು ಅಂತಿಮಗೊಳ್ಳದೇ ಇರುವುದು ಟಿ20 ವಿಶ್ವಕಪ್ ಟೂರ್ನಿಯ ರೋಚಕತೆಯನ್ನು ಹೆಚ್ಚಿಸಿದೆ. ಈ ಟಿ20 ಟೂರ್ನಿಯಲ್ಲೇ ಪಾಲ್ಗೊಂಡಿದ್ದ 20 ತಂಡಗಳ ಪೈಕಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿರುವ ತಂಡಗಳೆಂದ್ರೆ, ಅದು ವೆಸ್ಟ್ ಇಂಡೀಸ್ ಹಾಗೂ ಭಾರತ ತಂಡ.

ಇದನ್ನೂ ಓದಿ: ಹುಬ್ಬಳ್ಳಿಯ ಮಣ್ಣಲ್ಲಿ ಹೊಸ ಇತಿಹಾಸ ಬರೆದ ಜಮ್ಮು-ಕಾಶ್ಮೀರ

ದೈತ್ಯ ದಾಂಡಿಗರಾದ ವೆಸ್ಟ್ ಇಂಡೀಸ್‌ಗೂ ಭಾರತದಲ್ಲಿ ಅಭಿಮಾನಿಗಳಿದ್ದಾರೆ. ಹಾಗಾಗಿ, ಈ ಪಂದ್ಯ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೆ ಸಾಕ್ಷಿಯಾಗಿ ನಿಲ್ಲುವುದಲ್ಲದೇ, ಸೆಮೀಸ್‌ಗೆ ಅಂದರ್-ಬಾಹರ್ ಪಂದ್ಯವಾಗಿಯೂ ಕಾಣಿಸಿಕೊಳ್ಳಲಿದೆ.

ನೆನಪಾಗ್ತಿದೆ 2016ರ ಸೆಮೀಸ್: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಈ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಎದುರು ಬದುರಾಗ್ತಿದ್ದಾರೆ. ಆದ್ರೆ, ಎಲ್ಲರಿಗೂ 2016 ಟಿ20 ವಿಶ್ವಕಪ್ ನೆನಪಾಗ್ತಿದೆ. ಏಕೆಂದ್ರೆ, ಈ ಎರಡೂ ಟಿ20 ವಿಶ್ವಕಪ್‌ಗಳು ನಡೆದಿದ್ದು ಭಾರತದಲ್ಲೇ ಆದ್ರೂ, ಅಂದು ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತವನ್ನು ಮಣಿಸಿ ಫೈನಲ್‌ಗೇರಿತ್ತು. ಅದಾದ ಬಳಿಕ, ಭಾರತದಲ್ಲೇ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ಇಂಡೀಸ್ ಭಾರತವನ್ನು ಮಣಿಸಿ ಸೆಮೀಸ್‌ಗೆ ಹೋಗುವ ಲೆಕ್ಕಾಚಾರದಲ್ಲಿದೆ.

ಅಚ್ಚರಿಯೆಂದರೆ, ಈ ಟೂರ್ನಿಯಲ್ಲಿ ಈ ಇಬ್ಬರು ಕೂಡ ಲೀಗ್ ಹಂತದಿಂದ ಸೋಲೇ ಕಂಡಿರಲಿಲ್ಲ. ಎ’ ಗುಂಪಿನಲ್ಲಿ ಅಗ್ರಜನಾಗಿ ಭಾರತ ಸೂಪರ್ 8 ಹಂತಕ್ಕೆ ಬಂದಿದ್ರೆ,ಸಿ’ ಗುಂಪಿನಿಂದ 8 ಅಂಕಗಳೊಂದಿಗೆ ವಿಂಡೀಸ್ ಮುಂದಿನ ಹಂತ ತಲುಪಿತ್ತು. ಈ ಎರಡೂ ತಂಡಗಳು ಸೂಪರ್ 8ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಸೋತಿರುವುದು ಕೂಡ ಕಾಕತಾಳೀಯ.

ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧದಿಂದಾಗಿ ವಿಮಾನ ರದ್ದು: ಪ್ರವಾಸಿಗರ ಪರದಾಟ

ದೈತ್ಯ ದಾಂಡಿಗರ ಬ್ಯಾಟಿಂಗ್ ಹಾಗೂ ಭಾರತ ತಂಡದ ಬೌಲಿಂಗ್ ವಿಭಾಗಗಳ ಮುಖಾಮುಖಿ ಎಂದೇ ಬಣ್ಣಿಸಬಹುದು. ಈ ಟೂರ್ನಿಯಲ್ಲಿ ವೆಸ್ಟ್ಇಂಡೀಸ್‌ಗೆ ಹೆಚ್ಚು ಬ್ಯಾಟರ್ಸ್ ಗೆಲುವುಗಳನ್ನು ತಂದಿದ್ದಾರೆ. ಅದೇ ರೀತಿ ಭಾರತಕ್ಕೆ ಬೌಲರ್‌ಗಳೇ ಅದರಲ್ಲೂ ಸ್ಪಿನ್ ಅಟ್ಯಾಕ್ ಎದುರಾಳಿಗಳನ್ನು ಮಣಿಸಿದ್ದಾರೆ. ವಿಂಡೀಸ್‌ನ ಬೌಲರ್ಸ್ ವಿಕೆಟ್ ಸಂಪಾದಿಸಿದಕ್ಕಿಂತ ಹೆಚ್ಚು ರನ್‌ಗಳಿಗೆ ಕಡಿವಾಣ ಹಾಕಬಲ್ಲರು. ಹಾಗಾಗಿ, ಭಾರತೀಯ ಬ್ಯಾಟರ್‌ಗಳಿಗೆ ಇಂದು ನಿಜವಾದ ಸವಾಲಾಗಿರಲಿದೆ. ಅದರಲ್ಲೂ ಆರಂಭಿಕ ಆಟಗಾರರ ಜೋಡಿ ದೊಡ್ಡ ಇನ್ನಿಂಗ್ಸ್ ಮೂಡಿ ಬರುತ್ತಿಲ್ಲ.

ಸೆಮೀಸ್ ತಲುಪದ ವಿಂಡೀಸ್: ಇನ್ನೊಂದು ಅಚ್ಚರಿ ವಿಚಾರವೆಂದರೆ, 2016ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ವೆಸ್ಟ್ ಇಂಡೀಸ್ ಅದಾದ ಬಳಿಕ ಐಸಿಸಿ ಟೂರ್ನಿಗಳಲ್ಲಿ ಒಮ್ಮೆಯೂ ಸೆಮೀಸ್‌ಗೆ ಲಗ್ಗೆಯಿಟ್ಟಿಲ್ಲ. ಹಾಗಾಗಿ, ವಿಂಡೀಸ್‌ಗೂ ಇಂದು ಭಾರತವೆಂಬ ಮಹಾಗೋಡೆಯನ್ನು ಯಶಸ್ವಿಯಾಗಿ ದಾಟಬೇಕಿದೆ.