ನೇಮಕಾತಿ ವಿಳಂಬದ ವಿರುದ್ಧ ಧಾರವಾಡದಲ್ಲಿ ರಾಜಕೀಯ ಕಾವು: ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ತೀವ್ರಗೊಂಡ ಪ್ರತಿಭಟನೆ
ಧಾರವಾಡ: ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ನಿರುದ್ಯೋಗಿ ಪದವೀಧರರ ಹೋರಾಟ ಸಮಿತಿ ನಡೆಸಿದ ಪ್ರತಿಭಟನೆಗೆ ವಿಪಕ್ಷ ನಾಯಕರು ಬೆಂಬಲ ಸೂಚಿಸಿರುವುದು ಹೋರಾಟಕ್ಕೆ ಹೊಸ ತಿರುವು ನೀಡಿದೆ.
ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನಸಭಾ ವಿಪಕ್ಷ ನಾಯಕ ಅರ್ ಅಶೋಕ, ಉಪ ನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದರು. ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಯುವಕರ ಭವಿಷ್ಯಕ್ಕೆ ಭದ್ರತೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಧಾರವಾಡದಲ್ಲಿ ಉಗ್ರಗೊಂಡ ಉದ್ಯೋಗಾಕಾಂಕ್ಷಿಗಳ ಹೋರಾಟ: ಸಚಿವರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ
ವಿಪಕ್ಷ ನಾಯಕರು ಮಾತನಾಡಿ, ಹಲವು ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಯುವಕರಲ್ಲಿ ಅಸಮಾಧಾನ ಉಂಟುಮಾಡಿದೆ ಎಂದು ಆರೋಪಿಸಿದರು. ಪ್ರತಿಭಟನಾಕಾರರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬರುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.






















