ವಿಜಯಪುರ(ತಾಳಿಕೋಟೆ): ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಅಂಗವಾಗಿ ಬಾಗಲಕೋಟೆ ನಗರದಲ್ಲಿ ನಡೆದ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿ ಶಾಂತಿಗೆ ಭಂಗ ತರುವಂತಹ ಕೆಲಸ ಮಾಡಿದ ಕಿಡಗೇಡಿಗಳ ಕೃತ್ಯವನ್ನು ಖಂಡಸಿ ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ) ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ದೇಶಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ. ಶಿವಾಜಿ ಮಹಾರಾಜರ ಜಯಂತಿ ಆಚರಣೆ ಸಂದರ್ಭದಲ್ಲಿ ಹಾದಿಬೀದಿ ರೌಡಿಗಳು ಪೂರ್ವ ತಯಾರಿಯೊಂದಿಗೆ ಮಸೀದಿಯೊಳಗೆ ಕಲ್ಲು ಕಬ್ಬಿಣದ ರಾಡು ಇತರ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡು ಮೆರವಣಿಗೆಯನ್ನು ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಇದನ್ನೂ ಓದಿ: ಅಬ್ಬಾ…! ಒಂದೇ ಮನೆಯಲ್ಲಿ ಬರೋಬ್ಬರಿ ಆರು ಹೆಬ್ಬಾವು ಪ್ರತ್ಯಕ್ಷ
ಕಾಂಗ್ರೆಸ್ ಸರ್ಕಾರ ಕೇವಲ ತಮ್ಮ ವೋಟ್‌ಬ್ಯಾಂಕಿಗಾಗಿ ಮತಾಂಧರಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸಾಗಿರುವುದು ಖಂಡನೀಯ. ಬಾಗಲಕೋಟ ಘಟನೆಗೆ ಸಂಬಂಧಿಸಿದಂತೆ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡದಿದ್ದಲ್ಲಿ ರಾಜ್ಯಾದ್ಯಂತ ಹಿಂದೂ ಪರ ಸಂಘಟನೆಗಳು ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.























