ಅಹಮದಾಬಾದ್: ಯುವತಿಯರನ್ನು ಲವ್ ಜಿಹಾದ್ ಬಲೆಗೆ ಬೀಳಿಸಲು ತಮ್ಮ ಗುರುತನ್ನು ಮರೆಮಾಚುವ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲಿದ್ದೇವೆ ಎಂದು ಗುಜರಾತ ಸರ್ಕಾರ ಘೋಷಿಸಿದೆ.
ಈ ನಿಯಮದನ್ವಯ ವಧು-ವರರು ಮದುವೆ ಆಗುತ್ತಿರುವ ಬಗ್ಗೆ ಪೋಷಕರಿಗೆ ತಿಳಿಸಿದ್ದೇವೆ ಎಂದು ಘೋಷಣಾ ಪತ್ರ ಬರೆದುಕೊಡಬೇಕು. ಇದಾದ 10 ದಿನದೊಳಗೆ ಪೋಷಕರಿಗೆ ಮಾಹಿತಿ ಹೋಗುತ್ತದೆ. ಆಮೇಲೆ 30 ದಿನದ ನಂತರ ಮದುವೆ ನೋಂದಣೆ ಆಗುತ್ತದೆ.
ಈ ಕುರಿತು ಅಧಿವೇಶನದಲ್ಲಿ ಮಾತನಾಡಿರುವ ಉಪಮುಖ್ಯಂತ್ರಿ ಹರ್ಷ ಸಿಂಘ್ವಿ, ಪ್ರಸ್ತುತ ಜಾರಿಯಲ್ಲಿರುವ ವಿವಾಹ ನೋಂದಣಿ ಪ್ರಕ್ರಿಯೆಲ್ಲಿ ಬದಲಾವಣೆ ತರಲಾಗುತ್ತದೆ. ಈ ಬದಲಾವಣೆಯು ಮದುವೆ ಪ್ರಮಾಣ ಪತ್ರ ಪಡೆಯುವುದಕ್ಕೆ ಕಡ್ಡಾಯವಾಗಲಿದೆ. ನೂತನ ನಿಯಮದ ಪ್ರಕಾರ, ವಧು-ವರರು ತಮ್ಮ ಹೆತ್ತವರಿಗೆ ತಾವು ಮದುವೆ ಆಗುತ್ತಿರುವ ವಿಚಾರ ತಿಳಿದಿದೆ ಎಂಬುದರ ಘೋಷಣಾ ಪತ್ರವನ್ನು ಸಲ್ಲಿಸಬೇಕು. ಜತೆಗೆ ಪೋಷಕರ ಗುರುತಿನ ಪುರಾವೆ, ಫೋನ್ ನಂಬರ್, ವಸತಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟ್ರಂಪ್‌ಗೆ ಸುಂಕ ವಿಧಿಸುವ ಅಧಿಕಾರವಿಲ್ಲ: ಅಮೆರಿಕ ಸುಪ್ರೀಂ ಕೋರ್ಟ್
ರಾಜ್ಯದಲ್ಲಿ ಯುವತಿಯರು ಲವ್ ಜಿಹಾದ್ ಬಲೆಗೆ ಸಿಲುಕಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಹಲವಾರು ಸಂಘ-ಸಂಸ್ಥೆಗಳ ವಿವಾಹ ನೋಂದಣಿ ಕಾನೂನನ್ನು ಮಾರ್ಪಡು ಮಾಡಬೇಕೆಂದು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ವಿವಾಹ ಪದ್ಧತಿಯನ್ನೂ ಗಮನದಲ್ಲಿಟ್ಟುಕೊಂಡು ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹೊಸ ಕಾನೂನಿನ ಪ್ರಕಾರ, ಯಾವುದೇ ಜೋಡಿ ಲವ್ ಮ್ಯಾರೇಜ್‌ಗೆ ನೇರವಾಗಿ ಸಹಾಯಕ ನೋಂದಣಿ ಅಧಿಕಾರಿಯ ಬಳಿ ಅರ್ಜಿ ಸಲ್ಲಿಸಬೇಕು. ಆ ಅಧಿಕಾರಿಯು ವಧು ಮತ್ತು ವರ ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅಲ್ಲದೇ ಅರ್ಜಿ ಸಲ್ಲಿಸಿದ 10 ದಿನಗಳ ಒಳಗೇ ಹುಡುಗಿಯ ಪೋಷಕರಿಗೆ ಮಾಹಿತಿ ನೀಡಬೇಕು.
ಇದನ್ನೂ ಓದಿ: ಹಳೇ ಹಂಡೆಯಲ್ಲಿ ಚಾಕಲೇಟ್ ಇಟ್ಟು ನಿಧಿ ಎಂದಿದ್ದ ಮೌಲ್ವಿ ಅರೆಸ್ಟ್
ಆ ಬಳಿಕ ಸಹಾಯಕ ನೋಂದಣಿ ಅಧಿಕಾರಿ ಸಂಬಂಧಪಟ್ಟ ಜಿಲ್ಲೆ ಹಾಗೂ ತಾಲೂಕು ಅಧಿಕಾರಿಗೆ ಅರ್ಜಿ ಕಳುಹಿಸುತ್ತಾರೆ. ಈ ವೇಳೆ ಎಲ್ಲ ದಾಖಲೆಗಳನ್ನು ಕುಲಂಕುಷವಾಗಿ ಪರಿಶೀಲಿಸಿದ ಬಳಿಕ 30 ದಿನಗಳ ನಂತರ ಮದುವೆ ನೊಂದಣಿ ಆಗುತ್ತದೆ. 40ನೇ ದಿನಕ್ಕೆ ಪ್ರಮಾಣ ಪತ್ರ ದೊರೆಯುತ್ತದೆ. ಇನ್ನು ಈ ಸಂಬಂಧ ಸರ್ಕಾರ ಪ್ರತ್ಯೇಕ ವೆಬ್‌ಸೈಟ್ ಆರಂಭಿಸಲಿದ್ದು, ಇಲ್ಲಿ ಪ್ರತಿ ಮದುವೆ ಅರ್ಜಿಯನ್ನೂ ವೀಕ್ಷಿಸಬಹುದಾಗಿದೆ ಎಂದು ಡಿಸಿಎಂ ಸಾಂಘ್ವಿ ಹೇಳಿದ್ದಾರೆ.





















