Home Advertisement
Home ನಮ್ಮ ಜಿಲ್ಲೆ ಗದಗ ಗದುಗಿನಲ್ಲಿ ಮತ್ತೊಂದು ದೇವರ ಮೂರ್ತಿ ಭಗ್ನ: ಭಕ್ತರ ಆಕ್ರೋಶ

ಗದುಗಿನಲ್ಲಿ ಮತ್ತೊಂದು ದೇವರ ಮೂರ್ತಿ ಭಗ್ನ: ಭಕ್ತರ ಆಕ್ರೋಶ

0
197

ಗದಗ: ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ಗ್ರಾಮದ ಸಮೀಪದಲ್ಲಿರುವ ದಂಡೇರಿ ಮರಿಯಮ್ಮ ದೇವಸ್ಥಾನದ ಮರಿಯಮ್ಮ ದೇವಿಯ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆ ಸಂಭವಿಸಿದ್ದು ಬುಧವಾರ ರಾತ್ರಿಯ ವೇಳೆಯಲ್ಲಿ ಈ ಘಟನೆ ನಡೆದಿರಬಹುದಾಗಿದ್ದು, ಗುರುವಾರ ಮುಂಜಾನೆ ಮೂರ್ತಿಯನ್ನು ನೋಡಿದ ಜನರು ಮೂರ್ತಿ ಜಖಂಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಸ್ಥಳಕ್ಕೆ ಆಗಮಿಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

ದಂಡೇರಿ ಮರಿಯಮ್ಮ ದೇವಸ್ಥಾನದಲ್ಲಿ ದೇವಿಯ ಮೂರ್ತಿಯ ಮುಖಭಾಗವನ್ನು ಸಂಪೂರ್ಣವಾಗಿ ಹಾನಿಗೊಳಿಸಲಾಗಿದೆ. ದೇವಸ್ಥಾನ ಅರ್ಚಕ ದ್ಯಾಮಣ್ಣ ಲಮಾಣಿ ಮಾತನಾಡಿ, ಬುಧವಾರ ರಾತ್ರಿ 10 ಗಂಟೆವರೆಗೂ ದೇವಸ್ಥಾನದಲ್ಲಿಯೇ ಇದ್ದು ರಾತ್ರಿ ದೇವಸ್ಥಾನ ಬಾಗಿಲಿಗೆ ಬೀಗ ಹಾಕಿ ಬಂದಿದ್ದೆ. ಗುರುವಾರ ಬೆಳಿಗ್ಗೆ ಪೂಜೆಗಾಗಿ ದೇವಸ್ಥಾನದ ಬಾಗಿಲು ತೆರೆಯಲು ಹೋದಾಗ ಕೀಲಿ ಮುರಿದು ಬಾಗಿಲು ತೆರೆಯಲಾಗಿತ್ತು. ದೇವಿಯ ಮೂರ್ತಿಯ ಮುಖದ ಭಾಗವನ್ನು ಒಡೆದು ಹಾಕಿದ್ದರು. ಕೂಡಲೇ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದರಿಂದ ದೌಡಾಯಿಸಿ ಬಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು ಎಂದಿದ್ದಾರೆ.

ಇದನ್ನೂ ಓದಿ: ಸಾರಿಗೆ ಮುಷ್ಕರ ವಾಪಸ್: ಸರ್ಕಾರಕ್ಕೆ ಮತ್ತೊಂದು ಡೆಡ್‌ಲೈನ್

ಗುರುವಾರ ಮುಂಜಾನೆ ದೇವಸ್ಥಾನದ ಬಳಿ ಜಮಾಯಿಸಿದ ಜನರು ಮೂರ್ತಿ ಭಗ್ನಗೊಳಿಸಿದ ಕೃತ್ಯ ಖಂಡಿಸಿದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರೋಹನ್ ಜಗದೀಶ, ಸಿಪಿಐ ಬಿ.ವಿ. ನ್ಯಾಮಗೌಡ, ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಪೊಲೀಸ್ ಸಿಬ್ಬಂದಿ ಭೇಟಿ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ.

ಮುಂಡರಗಿಯಲ್ಲೂ ದುಷ್ಕೃತ್ಯ: ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರದ ಗಾಳಿ ಬಸವೇಶ್ವರ ದೇವಸ್ಥಾನ ಶಿವಲಿಂಗ, ಪಾಣಿಪೀಠ ಭಗ್ನಗೊಳಿಸಿದ ಘಟನೆ ನಡೆದಿದ್ದು, ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.