ದಾವಣಗೆರೆ: ಜಿಲ್ಲಾ ನ್ಯಾಯಾಲಯಕ್ಕೆ ಮಧ್ಯಾಹ್ನ 12-30ಕ್ಕೆ RDX ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸಂಕೀರ್ಣವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಯಿತು.
ಸೋಮವಾರ ಬೆಳಗ್ಗೆ ದಾವಣಗೆರೆ ಅರಸು ಬಡಾವಣೆಯಲ್ಲಿ ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್‌ಗೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ತಕ್ಷಣ ಶ್ವಾನ ದಳ, ಬಾಂಬ್ ನಿಷ್ಕೃಯ ದಳ ನ್ಯಾಯಾಲಯಕ್ಕೆ ಆಗಮಿಸಿ ಇಡೀ ನ್ಯಾಯಾಲಯ ಸಂಕೀರ್ಣವನ್ನು ತಪಾಸಣೆ ನಡೆಸಿತು. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ತಿಳಿಯುತ್ತಿದ್ದಂತೆ ಎರಡು ನ್ಯಾಯಾಲಯಗಳ ಕಲಾಪ ಬಂದ್ ಮಾಡಲಾಯಿತು. ನ್ಯಾಯಾಧೀಶರು, ವಕೀಲರು, ಬಂದ ಜನರನ್ನ ಹೊರಗೆ ಕಳುಹಿಸಿ ಕೋರ್ಟ್ ಗೇಟ್‌ಗೆ ಬೀಗ ಹಾಕಲಾಯಿತು.
ಬಾಂಬ್ ಬೆದರಿಕೆ ಕರೆಯಿಂದ ಕೋರ್ಟ್ ಆವರಣದ ಹೊರಗೆ ಆತಂಕದಿಂದ ನಿಂತ ಜನರು ನಿಂತಿದ್ದು, ನ್ಯಾಯಾಲಯದ ಸುತ್ತ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ತಮಿಳುನಾಡಿನಿಂದ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ ಎನ್ನಲಾಗಿದ್ದು, ಮೂಲವನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಸೇರಿದಂತೆ ನಗರದ ಪ್ರಮುಖ ಸ್ಥಳಗಳು, ಕಟ್ಟಡಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.























