Home Advertisement
Home ಕ್ರೀಡೆ T20 World Cup: ಇಂದು ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ

T20 World Cup: ಇಂದು ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ

0
90

ಕೊಲಂಬೋ: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಮಾತಿನ ಚಕಮಕಿಗಳೇ ನಡೆದು ಹೋಗಿವೆ. ಈ ಕಾದಾಟಕ್ಕಾಗಿ ಬಹಿಷ್ಕಾರ, ತಿರಸ್ಕಾರಗಳು ಗತಿಸಿ ಹೋಗಿವೆ. ನಡೆಯದೇ ಹೋಗಬಹುದೆಂಬ ಆತಂಕವಿದ್ದ ಈ ಪಂದ್ಯಕ್ಕೆ ಕೊನೆಗೂ ಜೀವ ಬಂದಿದೆ. ಪಂದ್ಯದಲ್ಲಿ ಕಿತ್ತಾಟವಲ್ಲ, ಪಂದ್ಯದ ಮುನ್ನವೇ ಈ ಎರಡು ರಾಷ್ಟ್ರಗಳ ಮಧ್ಯೆಯೇ ಸಮರದ ಬಿಸಿ ಏರ್ಪಟ್ಟಿತ್ತು. ದಶಕಗಳ ಇತಿಹಾಸದಲ್ಲೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಅತಿದೊಡ್ಡ ಕಾಳಗ ಎಂದು ಇಂದಿನ ಪಂದ್ಯ ಎನ್ನಿಸಿಕೊಂಡಿದೆ.

ಇಂಡೋ-ಪಾಕ್ ಕ್ರಿಕೆಟ್ ಆಟವೇ ಸ್ಥಗಿತಗೊಳ್ಳಬೇಕು ಎಂಬ ಮಾತುಗಳು ಈಗ ನಿಂತು ಹೋಗಿದ್ದು, ಈ ಇಬ್ಬರ ಆಟವನ್ನು ಮತ್ತೊಮ್ಮೆ ನೋಡಲೇಬೇಕು ಎನ್ನುವಂತಹ ಕುತೂಹಲ ಎಬ್ಬಿಸಿದೆ. ಇಷ್ಟೊಂದು ಆಸಕ್ತಿಗಳನ್ನು ಹೊತ್ತುಕೊಂಡೇ ಇಂದು ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ವೈರಿಯ ಎದುರು ಭಾರತ ಕಣಕ್ಕಿಳಿಯುತ್ತಿದೆ.

ಕಳೆದ 5-6 ತಿಂಗಳಿನಿಂದ ಈ ಎರಡು ರಾಷ್ಟ್ರಗಳ ಮಧ್ಯೆ ನಡೆದಂತಹ ಬಾಹ್ಯ ಕಿತ್ತಾಟ ವಿಶ್ವಕ್ರಿಕೆಟ್‌ನಲ್ಲಿ ಮತ್ಯಾವುದೇ ರಾಷ್ಟ್ರಗಳ ಮಧ್ಯೆ ನಡೆದಿಲ್ಲ. ಕ್ರಿಕೆಟ್‌ನಿಂದಾಚೇ ಎರಡು ಕ್ರಿಕೆಟ್ ಮಂಡಳಿಗಳ ಗುದ್ದಾಟಕ್ಕೂ ಸಾಕ್ಷಿಯಾಗಿ ಹಲವು ಘಟನೆಗಳು ನಡೆದಿವೆ. ಹಾಗಾಗಿಯೇ, ಇಂದು ಪಂದ್ಯ ಫಲಿತಾಂಶ ಕೇವಲ ಫಲಿತಾಂಶವಾಗಿರದೇ, ಉಭಯ ರಾಷ್ಟ್ರಗಳಿಗೆ ಪ್ರತಿಷ್ಠೆಯ ಪಣವಾಗಿ ರೂಪುಗೊಂಡಿದೆ.

ಟಿ20 ವಿಶ್ವಕಪ್‌ನ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಪಾಕಿಸ್ತಾನ ಒಂದಿಲ್ಲೊಂದು ವಿಚಾರದ ಮೂಲಕ ಭಾರತವನ್ನು ಕೆಣಕುತ್ತಲೇ ಬಂದಿದೆ. ಬಾಂಗ್ಲಾದೇಶಕ್ಕೆ ಬೆಂಬಲ ನೀಡುವ ಹೆಸರಿನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿ ವಿಶ್ವ ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟ್ ಮೇಲೆ ಸವಾಲೆಸಿದಿತ್ತು. ಆದ್ರೆ, ಐಸಿಸಿ ಉರುಳಿಸಿದ ಒಂದೇ ದಾಳಕ್ಕೆ ಸುಮ್ಮನಾಗಿ ಈಗ ಪಂದ್ಯವನ್ನು ಆಡಲು ಮುಂದಾಗಿದೆ. ಹಾಗಾಗಿ, ಈ ಪಂದ್ಯದಲ್ಲಿ ಪಾಕ್ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಮಯ ಬಂದಾಗಿದೆ.

ದುಬೈನಲ್ಲಿ ಪಾಕಿಸ್ತಾನದ ವಿರುದ್ಧದ ಮೂರು ಏಷ್ಯಾ ಕಪ್ ಗೆಲುವುಗಳಲ್ಲಿ ಭಾರತ ಎರಡು ಬಾರಿ ತನ್ನದಾಗಿಸಿಕೊಂಡ ಬಳಿಕ, ಅದರಲ್ಲೂ ಕಳೆದ ಏಷ್ಯಾಕಪ್‌ನಲ್ಲಿ 3ಕ್ಕೆ ಮೂರೂ ಪಂದ್ಯಗಳಲ್ಲಿ ಪಾಕ್‌ನ ಬಗ್ಗು ಬಡಿದ ಕೀರ್ತಿ ಸೂರ್ಯಪಡೆಗಿದೆ. 2021ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಮಣಿಸಿದ ಬಳಿಕ ಈವರೆಗೂ ಒಮ್ಮೆಯೂ ಗೆಲ್ಲಲಾಗದ ಪಾಕಿಸ್ತಾನಕ್ಕೆ ಕೇವಲ 1 ಗೆಲುವು ಕೂಡ ಪಾಕ್ ಅಭಿಮಾನಿಗಳಲ್ಲಿ ಸಂಭ್ರಮ ತಂದಿಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಆದ್ರೆ, ಭಾರತಕ್ಕಿಂದು ಪಾಕ್‌ಗೆ ಮೈದಾನದಾಚೆಗಿನ ವಿಚಾರಗಳಿಗೆ ಸಂಬಂಧಿಸಿ ಪಾಠ ಕಲಿಸುವಂತಹ ಸಮಯ ಸಿಕ್ಕಿದ್ದು, ಈ ಅವಕಾಶವನ್ನು ಭಾರತ ತಂಡ ಕಳೆದುಕೊಳ್ಳುವುದಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ.

ಭಾರತ ತಂಡದ ವಿಚಾರದಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಸತತ 10ನೇ ಗೆಲುವು ಕಂಡು ವಿಶ್ವದಾಖಲೆ ಮಾಡಿದೆ. ಈಗ 11ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಪಾಕ್ ವಿರುದ್ಧ ಭಾರತದ ಯಾವೊಬ್ಬ ಆಟಗಾರ ಕೂಡ ಕಳಪೆಯಾಟ ಆಡಲಿದ್ದಾರೆ ಎನ್ನುವ ಕಲ್ಪನೆ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಪಾಕ್ ತಂಡದ ಆಟಗಾರರು ಇದೇ ಮನೋಭಾವನೆ ಹೊಂದಿರುವುದರಿಂದ, ಇಂದು ಪಂದ್ಯ ಏಕಾಮುಖಿಯಾಗುವುದು ಸತ್ಯಕ್ಕೆ ದೂರವಾಗಿದೆ.

ರಾಜಕೀಯ ಸಂಘರ್ಷ, ಇನ್ನೊಂದೆಡೆ ಪಾಕ್ ವಿರುದ್ಧ ಭಾರತದ ದಾಖಲೆ, ಮತ್ತೊಂದೆಡೆ ಪಾಕ್ ನಡೆದುಕೊಂಡ ರೀತಿಗೆ ಇಂದು ಪ್ರತ್ಯುತ್ತರ ಸಿಗಲಿದೆಯೇ ಎಂಬುದನ್ನು ಪ್ರೇಮದಾಸ ಸ್ಟೇಡಿಯಂನಲ್ಲಿ ಬಟಾಬಯಲಾಗಲಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

Previous articleಬಳ್ಳಾರಿ–ಹೊಸಪೇಟೆ ಮಲ್ಟಿಟ್ರ್ಯಾಕ್: ಕೇಂದ್ರ ಸಚಿವ ಸಂಪುಟ ಅನುಮೋದನೆ
Next articleಶಿವರಾತ್ರಿ ಪೂಜೆಗೆ ನಿರಾಕರಣೆ: ಕಲಬುರಗಿ ಕೋಟೆ ಸುತ್ತ ಉದ್ವಿಗ್ನ ಸ್ಥಿತಿ