ಕೈಗಾರಿಕಾ ನಿವೇಶನಗಳಲ್ಲಿ FAR ಹೆಚ್ಚಳ: ರೈತರು ಮತ್ತು ಉದ್ಯಮಿಗಳಿಗೆ ಲಾಭ
ಬೆಂಗಳೂರು: ಕೈಗಾರಿಕಾ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಕೈಗಾರಿಕಾ ನಿವೇಶನಗಳಲ್ಲಿ ಮಹಡಿ ವಿಸ್ತೀರ್ಣ ಅನುಪಾತ (FAR)ವನ್ನು ಕೈಗಾರಿಕಾ ಸ್ನೇಹಿಯಾಗಿ ಪರಿಷ್ಕರಿಸಲಾಗಿದೆ. 65 ಶೇಕಡಾ ಬಳಕೆ ಮಿತಿಯನ್ನು 75 ಶೇಕಡಾಗೆ ಹೆಚ್ಚಿಸಲಾಗಿದ್ದು, ಇದರಿಂದ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಹೊಸ ನಿಯಮಾವಳಿಗಳ ಪ್ರಕಾರ, ಪ್ರೀಮಿಯಂ ಕೈಗಾರಿಕಾ ಪ್ಲಾಟ್‌ಗಳಲ್ಲಿ FAR ಅನ್ನು 3.25ರಿಂದ 5.2ರವರೆಗೆ ಹೆಚ್ಚಿಸಲಾಗಿದೆ. ಇದರಿಂದ ಕಡಿಮೆ ಭೂಮಿಯಲ್ಲಿ ಹೆಚ್ಚಿನ ನಿರ್ಮಾಣ ಸಾಧ್ಯವಾಗಲಿದ್ದು, ಕೈಗಾರಿಕೆಗಳಿಗಾಗಿ ಹೆಚ್ಚಿನ ಭೂಸ್ವಾಧೀನ ಅಗತ್ಯವೂ ತಗ್ಗಲಿದೆ.
ಇದನ್ನೂ ಓದಿ: ಹೊಸಕೋಟೆ: ಬೆಳ್ಳಂಬೆಳಗ್ಗೆ ಭೀಕರ ಸರಣಿ ಅಪಘಾತ – 7 ಜನ ಸಾವು
ಹೂಡಿಕೆದಾರರಿಗೆ ಸೌಲಭ್ಯ ಹೆಚ್ಚಳ: ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಹಳೆಯ ನಿಯಮಗಳಿಂದಾಗಿ ಹೂಡಿಕೆದಾರರಿಗೆ ಎದುರಾಗುತ್ತಿದ್ದ ಸೆಟ್‌ಬ್ಯಾಕ್, ಪಾರ್ಕಿಂಗ್ ಮತ್ತು ಕಟ್ಟಡ ಎತ್ತರ ಮಿತಿಗಳ ಅಡಚಣೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಮಾರ್ಗಸೂಚಿಗಳ ಪ್ರಕಾರ: 7 ಮೀ. ಮತ್ತು 15 ಮೀ. ಎತ್ತರದ ಕಟ್ಟಡಗಳಿಗೆ ಅಗತ್ಯವಿದ್ದ ಖಾಲಿ ಜಾಗದ ಪ್ರಮಾಣ ಇಳಿಕೆ, ಪಾರ್ಕಿಂಗ್ ಮೀಸಲು ಜಾಗ 5%ರಿಂದ 3%ಕ್ಕೆ ಕಡಿತ, ಸಾಮಾನ್ಯ ಕೈಗಾರಿಕಾ ಪ್ಲಾಟ್‌ಗಳಲ್ಲಿ 15% ವಸತಿ ಸೌಲಭ್ಯಕ್ಕೆ ಅವಕಾಶ, 50 ಎಕರೆಗಿಂತ ಹೆಚ್ಚಿನ ಪ್ಲಾಟ್‌ಗಳಲ್ಲಿ 10% ವಸತಿ–ವಾಣಿಜ್ಯ ಬಳಕೆಗೆ ಅನುಮತಿ, ಈ ಕ್ರಮಗಳಿಂದ ಉದ್ಯಮ ಮತ್ತು ಜೀವನಶೈಲಿಯ ನಡುವೆ ಸಮತೋಲನ ಸಾಧಿಸಲು ನೆರವಾಗಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಷರತ್ತು ಬದ್ಧ ಅನುಮತಿ
ರಸ್ತೆಯ ಅಗಲಕ್ಕೆ ಅನುಗುಣವಾಗಿ FAR ಹೆಚ್ಚಳ: ರಸ್ತೆಯ ಅಗಲದ ಆಧಾರದ ಮೇಲೆ FAR ಅನ್ನು ಹೀಗಾಗಿ ಪರಿಷ್ಕರಿಸಲಾಗಿದೆ 30 ಮೀ. ರಸ್ತೆ ಪಕ್ಕದಲ್ಲಿ – 5.2, 24–30 ಮೀ. ರಸ್ತೆ – 4.8, 18–24 ಮೀ. ರಸ್ತೆ – 4.0, 12–18 ಮೀ. ರಸ್ತೆ – 3.6, 12 ಮೀ.ಗಿಂತ ಕಡಿಮೆ ರಸ್ತೆ – 2.8, ಈ ವ್ಯವಸ್ಥೆ ವರ್ಟಿಕಲ್ ಡೆವಲಪ್ಮೆಂಟ್‌ಗೆ ದಾರಿ ತೆರೆದು, ಕಡಿಮೆ ಭೂಸ್ವಾಧೀನ, ಕಡಿಮೆ ವೆಚ್ಚ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದು ತಿಳಿಸಲಾಗಿದೆ.
ರೈತರು ಮತ್ತು ಉದ್ಯಮಿಗಳಿಗೆ ಲಾಭ: ಈ ಹೊಸ ನೀತಿಯಿಂದ ಉದ್ಯಮಿಗಳಿಗೆ ಹೂಡಿಕೆ ಭಾರ ಕಡಿಮೆಯಾಗುವುದರ ಜೊತೆಗೆ, ರೈತರಿಗೆ ತಮ್ಮ ಭೂಮಿಯ ರಕ್ಷಣೆ ಹಾಗೂ ಅಭಿವೃದ್ಧಿಪಡಿಸಿದ ಭೂಮಿಯ ರೂಪದಲ್ಲಿ ಲಾಭ ದೊರೆಯಲಿದೆ. ಇದು ಸುಲಲಿತ ವಹಿವಾಟು ಸಂಸ್ಕೃತಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಸಚಿವ ಸಂಪುಟ ನಿರ್ಣಯ
ಈ ಕ್ರಮವು ಕರ್ನಾಟಕದ ಕೈಗಾರಿಕಾ ವಾತಾವರಣಕ್ಕೆ ಹೊಸ ಎತ್ತರ ನೀಡಲಿದ್ದು, ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿರೀಕ್ಷೆ ವ್ಯಕ್ತವಾಗಿದೆ.






















