ಬಳ್ಳಾರಿ (ತೆಕ್ಕಲಕೋಟೆ) : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಪ್ರಮುಖ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಶ್ಚಿಮ–ನೈರುತ್ಯ ಭಾಗದಲ್ಲಿರುವ ಗೌಡ್ರಮೂಲೆ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಾಗೈತಿಹಾಸಿಕ ಉತ್ಖನನ ಕಾರ್ಯದ ವೇಳೆ ಗುರುವಾರ ಆದಿಮಾನವನ ಮೂರನೇ ಅಸ್ಥಿಪಂಜರ ಪತ್ತೆಯಾಗಿದ್ದು, ಸಂಶೋಧಕರಲ್ಲಿ ಹಾಗೂ ಇತಿಹಾಸ ಅಧ್ಯಯನಾಸಕ್ತರಲ್ಲಿ ವಿಶೇಷ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಇದೇ ಪ್ರದೇಶದಲ್ಲಿ ಎರಡು ಆದಿಮಾನವ ಅಸ್ಥಿಪಂಜರಗಳು ಹಾಗೂ ಪಳೆಯುಳಿಕೆಗಳು ಪತ್ತೆಯಾಗಿದ್ದವು. ಪತ್ತೆಯಾಗಿದ್ದ ಆದಿಮಾನವನ ಪಳೆಯುಳಿಕೆಗಳಿಂದ ಸ್ವಲ್ಪ ಅಂತರದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದ ಸಂದರ್ಭದಲ್ಲಿ ಮತ್ತೊಂದು ಅಸ್ಥಿಪಂಜರ ಗೋಚರಿಸಿದ್ದು, ಈ ಪ್ರದೇಶದ ಐತಿಹಾಸಿಕ ಮಹತ್ವ ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಜಿಪಂ CEO ಕಾರ್ ಜಪ್ತಿಗೆ ಮುಂದಾದ ನ್ಯಾಯಾಲಯದ ಸಿಬ್ಬಂದಿ
ಈ ಕುರಿತು ಮಾಹಿತಿ ನೀಡಿದ ಅಮೆರಿಕದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ಕಾರ್ಯದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರು, “ಈ ಸ್ಥಳವು ಸುಮಾರು 3.5 ಸಾವಿರದಿಂದ 5 ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಒಳಗೊಂಡಿದ್ದು, ಮಾನವ ನಾಗರಿಕತೆಯ ಪ್ರಾರಂಭಿಕ ಹಂತವನ್ನು ತಿಳಿಯಲು ಅತ್ಯಂತ ಮಹತ್ವದ ಸಾಕ್ಷ್ಯಗಳನ್ನು ಒದಗಿಸುತ್ತದೆ” ಎಂದು ಹೇಳಿದರು.
ಪತ್ತೆಯಾದ ಅಸ್ಥಿಪಂಜರಗಳು, ಪಳೆಯುಳಿಕೆಗಳು ಹಾಗೂ ಇತರ ವಸ್ತುಗಳನ್ನು ವಿಜ್ಞಾನಾಧಾರಿತವಾಗಿ ಸಂರಕ್ಷಿಸಿ, ಡಿಎನ್‌ಎ ಪರೀಕ್ಷೆ, ಕಾರ್ಬನ್ ಡೇಟಿಂಗ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಮೂಲಕ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: JDS ಜಿಲ್ಲಾಧ್ಯಕ್ಷರ ಆಯ್ಕೆ ವಿವಾದ: ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ
ಈ ಉತ್ಖನನ ಕಾರ್ಯಕ್ಕೆ ಸ್ಥಳೀಯ ಆಡಳಿತದ ಸಹಕಾರವೂ ಲಭ್ಯವಿದ್ದು, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಿದ್ದವೇಂದ್ರ ಬಾಲಪ್ಪ, ದ್ರುವಕುಮಾರ್, ಖಾಸಿಂ ಸಬ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಸಂಶೋಧಕರಿಗೆ ಪ್ರೋತ್ಸಾಹ ನೀಡಿದರು.
ಗೌಡ್ರಮೂಲೆ ಬೆಟ್ಟ ಪ್ರದೇಶವು ಮುಂದಿನ ದಿನಗಳಲ್ಲಿ ಪ್ರಮುಖ ಪುರಾತತ್ವ ತಾಣವಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದ್ದು, ಪ್ರವಾಸೋದ್ಯಮ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.























