ಈ. ಮಹೇಶಬಾಬು
ಚಿತ್ರದುರ್ಗ: ವೀರ-ಶೂರರ ನೆಲೆ, ಮದವೇರಿದ ಆನೆ ಮದವಡಗಿಸಿದ ಮದಕರಿಯ ಊರು, ಗಂಡುಮೆಟ್ಟಿನ ನೆಲ, ಪಾಳೇಗಾರರ ಬೀಡು…! ಚಿತ್ರದುರ್ಗದ ಪಾಲಿಗೆ ಹೆಮ್ಮೆಯ ಸಂಕೇತಗಳು ಇವು. ವೀರ-ಶೂರತ್ವಕ್ಕೆ ಸರಿಸಾಟಿಯಿಲ್ಲದಂತೆ ಜನಪರ ಆಡಳಿತ ನಡೆಸಿದ ಮದಕರಿ ನಾಯಕರ ಹೆಜ್ಜೆ ಗುರುತುಗಳು ದುರ್ಗದ ಜನರ ಪಾಲಿಗೆ ಗೌರವದ ಸೂಚಕಗಳು.
ಚಿತ್ರದುರ್ಗ-ದಾವಣಗೆರೆ ಅವಳಿ ಜಿಲ್ಲೆಯಲ್ಲಂತೂ ಮದಕರಿ ಹೆಸರೇ ರೋಮಾಂಚನ. ಮದಕರಿ ಹೆಸರಲ್ಲಿ ಸಂಘಟನೆಗಳು ನೂರಾರು. ಈಗಲೂ ಮದಕರಿ ಜಯಂತಿ, ದುರ್ಗೋತ್ಸವ ಸೇರಿ ವಿವಿಧ ಸಂದರ್ಭದಲ್ಲಿ ಪಾಳೇಗಾರರ ಗುಣಗಾನ ಸಾಮಾನ್ಯ. ಪ್ರತಿವರ್ಷ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ವೇಳೆ ಮುರುಘಾ ಶ್ರೀಗಳು-ಪಾಳೇಗಾರ ವಂಶಸ್ಥರು ಪರಸ್ಪರ ಗೌರವ ಸಮರ್ಪಣೆ ಸಲ್ಲಿಸುವುದು ನಾಡಿನ ಜನರ ಪಾಲಿಗೆ ಸಂಭ್ರಮ.
ಇಂತಹ ಮದಕರಿ ನಾಯಕ ವಂಶಸ್ಥರು ಎಲ್ಲಿದ್ದಾರೆ, ಅರ‍್ಯಾರೂ, ಎಷ್ಟು ಮಂದಿ ಇದ್ದಾರೆ… ಹೀಗೆ ಜಾಡು ಹುಡುಕುತ್ತ ಸಾಗಿದರೆ ಬೆರಳೆಣಿಕೆ ಮಂದಿ ನೆಮ್ಮದಿ ಜೀವನ ಕಟ್ಟಿಕೊಂಡಿದ್ದರೇ, ಕೆಲವರ ಬದುಕು ಮೂರಾಬಟ್ಟೆಯಾಗಿದೆ. ಅದರಲ್ಲೂ ಹಲವರ ಕಿರುಕುಳ ಮೆಟ್ಟಿನಿಂತು ಮದಕರಿ ವಂಶಸ್ಥರೆಂದು ನ್ಯಾಯಾಲದಿಂದಲೇ ತೀರ್ಪು ಪಡೆದುಕೊಂಡ ಚಳ್ಳಕೆರೆಯ ದಿವಂಗತ ಪಿ.ಆರ್. ವೀರಭದ್ರನಾಯಕ ಕುಟುಂಬ ಸಂಪೂರ್ಣ ಸಂಕಷ್ಟದಲ್ಲಿದೆ.
ವೀರಭದ್ರನಾಯಕ ತಂದೆ ಸಿ.ಪಿ.ರಾಮಸ್ವಾಮಿ ನಾಯಕ ಬಿಲ್‌ಕಲೆಕ್ಟರ್ ಆಗಿದ್ದ ವೇಳೆ ಚಳ್ಳಕೆರೆ ಪುರಸಭೆಯ ವಸತಿ ಗೃಹದಲ್ಲಿ ವಾಸವಿದ್ದು, ಅವರ ನಿಧನದ ಬಳಿಕವೂ ಕುಟುಂಬದ ಪಾಲಿಗೆ ಅದೇ ಅರೆಮನೆ ಆಗಿತ್ತು. ಕಾಲಕ್ರಮೇಣ ಕಾನೂನು ತೊಡಕು ಅವರನ್ನು ಆ ವಸತಿ ಗೃಹದಿಂದಲೇ ಹೊರಬೀಳುವಂತೆ ಮಾಡಿತು. ಅದೇ ಕೊರಗಿನಲ್ಲಿ ವೀರಭದ್ರನಾಯಕ ಮೃತಪಟ್ಟರು.
ಅಕ್ಟೋಬರ್ 23, 2025ಕ್ಕೆ ಪತ್ನಿ ಬಿ.ಎಸ್. ಚಂದ್ರಮ್ಮ ನಾಗತಿದೇವಿ ಕೂಡ ಸದ್ದಿಲ್ಲದ ಇಹಲೋಕ ತ್ಯಜಿಸಿದರು. ತಂದೆ-ತಾಯಿ ಕಳೆದುಕೊಂಡಿರುವ ಏಕೈಕ ಪುತ್ರ ರಾಜಾ ಪರಶುರಾಮ ನಾಯಕ ಅವರ ಬದುಕು ಈಗ ಮೂರಾಬಟ್ಟೆಯಾಗಿದೆ. ಕೋಟೆ ಕಟ್ಟಿ ಮೆರೆದ ವಂಶದ ಕುಡಿ ಈಗ ಚಿತ್ರದುರ್ಗದಲ್ಲಿ ಚಿಕ್ಕದೊಂದು ಬಾಡಿಗೆ ರೂಮಿನಲ್ಲಿ ಬದುಕಿನ ಬಂಡಿ ಸಾಗಿಸುತ್ತಿದೆ. ಜೀವನಕ್ಕಾಗಿ ಇದ್ದ ಅತಿಥಿ ಉಪನ್ಯಾಸಕ ಹುದ್ದೆ ಈಚೆಗೆ ಕಳೆದುಕೊಂಡು, ಬೀದಿಗೆ ಬಿದ್ದಿದ್ದಾರೆ. ಸರಣಿ ಸಂಕಷ್ಟಗಳನ್ನು ಹೃದಯದಲ್ಲಿಟ್ಟುಕೊಂಡು ಮದಕರಿ ವಂಶಸ್ಥರೆಂಬ ಹೆಮ್ಮೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ.
ಪ್ರತಿವರ್ಷ ಅ. 13 ಮದಕರಿ ಜಯಂತಿ. ಅಂದು ಇಡೀ ದುರ್ಗದಲ್ಲಿ ಸಂಭ್ರಮ. ಪಕ್ಷಾತೀತವಾಗಿ ನಾಯಕರುಗಳ ಸಂಗಮ. ಲಕ್ಷಾಂತರ ರೂ. ವೆಚ್ಚ. ಆದರೆ, ಮದಕರಿ ವಂಶಸ್ಥರ ಬದುಕು ಹೇಗಿದೆಯೆಂಬ ಚಿತ್ರಣ ಕಣ್ಣಿಗೆ ರಾಚದಿರುವುದೇ ದುರಂತ. ಕೋಟೆಕಟ್ಟಿದ ಪಾಳೇಗಾರರ ಜಾತಿಯವರೆಂದೇ ಹೇಳಿಕೊಂಡು ವಿಜೃಂಭಿಸುವರು ಸಹಸ್ರಾರು ಮಂದಿ. ಆದರೆ, ಬೆರಳೆಣಿಕೆ ಸಂಖ್ಯೆಯಲ್ಲಿರುವ ವಂಶಸ್ಥರಿಗೆ ಗೌರವದ ಬದುಕು ಕಲ್ಪಿಸಿಕೊಡುವಲ್ಲಿ ಮಾತ್ರ ನಿರುತ್ಸಾಹ.
ವಂಶಸ್ಥರ ಬದುಕು ಸುಧಾರಿಸಬೇಕು, ಈ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಕೆಲವರು ವೇದಿಕೆಯಲ್ಲಿ ಹೇಳುತ್ತಾರೆ. ಮನೆ, ಜಮೀನು ವ್ಯವಸ್ಥೆ ಮಾಡಬೇಕೆಂಬ ಕೂಗು ಮಾರ್ಧನಿಸುತ್ತದೆ. ಕಾರ್ಯಕ್ರಮದ ಬಳಿಕ ಸದ್ದಡುಗುತ್ತದೆ. ಅಲ್ಲಿಗೆ ಅಭಿಮಾನ, ಗೌರವದ ಮಾತುಗಳಿಗೆ ತೆರೆಬೀಳುತ್ತದೆ.
ಈಡೇರದ ಭರವಸೆ: ಮದಕರಿ ಅಭಿಮಾನಿಗಳಾದ ನಾವು ಅವರ ವಂಶಸ್ಥರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಅವರಿಗೆ ಮೂಲಸೌಲಭ್ಯ ಕಲ್ಪಿಸಿ, ಅವರು ಉತ್ತಮ ಜೀವನ ನಡೆಸುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಪ್ರತಿವರ್ಷ ಮದಕರಿ ಜಯಂತ್ಯುತ್ಸವದಲ್ಲಿ ಹೇಳುತ್ತಾರೆ. ಆದರೂ ವಂಶಸ್ಥರ ಬದುಕು ಸುಧಾರಿಸಿಲ್ಲ.
ಲೀಡರ್‌ಗಳ ಹೊಣೆ: ವಾಲ್ಮೀಕಿ ಜನರ ಪಾಲಿಗೆ ಲೀಡರ್ ಆಗಿರುವ ಸತೀಶ್ ಜಾರಕಿಹೊಳಿ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಟಿ.ರಘುಮೂರ್ತಿ, ವಾಲ್ಮೀಜಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ ಹಾಗೂ ಅನೇಕ ಯುವಕರಿಗೆ ಬದುಕು ಕಲ್ಪಿಸಿಕೊಟ್ಟಿರುವ ಬಿ. ಕಾಂತರಾಜ್ ಸೇರಿ ನೂರಾರು ಮುಖಂಡರು ಮನಸ್ಸು ಮಾಡಿದರೆ ವಂಶಸ್ಥರಿಗೆ ಗೌರವದ ಬದುಕು ಕಲ್ಪಿಸುವುದು ಸುಲಭ.
ಶ್ರೀಗಳ ಕೃಪೆ ಬೇಕು: ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಮುದಾಯದ ಆರಾಧ್ಯ ಗುರುಗಳು. ಸ್ವಾಮೀಜಿಯ ಮಾತು ಆದೇಶದಂತೆ ಪಾಲಿಸುವವರ ಸಂಖ್ಯೆ ಹೆಚ್ಚು. ಶ್ರೀಗಳು ಕೃಪೆ ತೋರಿದರೆ ವಂಶಸ್ಥರ ಬದುಕು ಉತ್ತಮಗೊಳ್ಳುವುದು ಖಚಿತ.
ವಂಶಸ್ಥರು ಒಗ್ಗೂಡಬೇಕಿದೆ: ಮದಕರಿ ವಂಶಸ್ಥರು ಯಾರೆಂಬುದನ್ನು ಸಂಶೋಧಕರು ಈಗಾಗಲೇ ದಾಖಲೆ ಸಮೇತ ದೃಢಪಡಿಸಿದ್ದಾರೆ. ರಾಜಾ ವೀರ ಮದಕರಿ, ರಾಜಾ ಪರಶುರಾಮ ನಾಯಕ ಹೀಗೆ ಇವರೆಲ್ಲರೂ ಹರಿದುಹಂಚಿ ಹೋಗಿದ್ದು, ಒಂದೇ ವೇದಿಕೆಯಡಿ ಬರಬೇಕಿದೆ.
ಗೌರವದ ಬದುಕು ಬೇಕು: ಜಯಂತಿ ಕಾರ್ಯಕ್ರಮಕ್ಕಾಗಿ ಡಿಜೆ, ಲೈಟಿಂಗ್ ಸೇರಿ ವಿವಿಧ ರೀತಿಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಸರಳವಾಗಿ ಆಚರಿಸಿದರೆ ಅದೇ ಹಣದಲ್ಲಿ ವಂಶಸ್ಥರಿಗೆ ಸೂರು ಭಾಗ್ಯದ ಜೊತೆಗೆ ಗೌರವದ ಬದುಕು ಕಲ್ಪಿಸಬಹುದು.























