Home Advertisement
Home ನಮ್ಮ ಜಿಲ್ಲೆ ಮೈಸೂರು ಹೈಕಮಾಂಡ್ ಸುಮ್ಮನಿರುವುದೇ ಬದಲಾವಣೆಗಳಿಲ್ಲ ಎಂಬುದಕ್ಕೆ ಸಾಕ್ಷಿ

ಹೈಕಮಾಂಡ್ ಸುಮ್ಮನಿರುವುದೇ ಬದಲಾವಣೆಗಳಿಲ್ಲ ಎಂಬುದಕ್ಕೆ ಸಾಕ್ಷಿ

0
68

ಸಿಎಂ ಘೋಷಣೆಗೆ ಮಹತ್ವ ಕೊಡಬೇಡಿ: ನಾನು ಹೋದ ಬಳಿಕ ಇನ್ನೊಬ್ಬರ ಹೆಸರನ್ನು ಕೂಗುತ್ತಾರೆ

ಮೈಸೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆಗಳು ಹೆಚ್ಚಾಗುತ್ತಿರುವ ನಡುವೆಯೇ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು “ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಎಲ್ಲಿಯೂ ಯಾವುದೇ ಚರ್ಚೆ ನಡೆಸಿಲ್ಲ” ಎಂದು ಸ್ಪಷ್ಟಪಡಿಸಿದ್ದು, ಈ ಹೇಳಿಕೆ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬುದನ್ನು ಪರೋಕ್ಷವಾಗಿ ಸಮರ್ಥಿಸಿದರು.

ಇದನ್ನೂ ಓದಿ: ಅಕ್ರಮ ಒತ್ತುವರಿ – ₹140 ಕೋಟಿ ಮೌಲ್ಯದ 7 ಎಕರೆ ಜಾಗ ವಶಕ್ಕೆ

“ಸಿಎಂ ಅಧಿಕಾರ ಹಂಚಿಕೆ ಕುರಿತು ಯಾವ ಚರ್ಚೆಯೂ ನಡೆದಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಹೈಕಮಾಂಡ್ ಘೋಷಣೆ ಮಾಡಿದೆ. ಹೈಕಮಾಂಡ್ ಎಲ್ಲಾದರೂ ಸಿದ್ದರಾಮಯ್ಯ ಬೇಡ ಎಂದು ಹೇಳಿದೆಯೇ? ಇಲ್ಲ. ಹಾಗಾಗಿ ಸಿಎಂ ಬದಲಾವಣೆ ಬಗ್ಗೆ ಗೊಂದಲಗಳೇ ಇಲ್ಲ,” ಎಂದು ಹೇಳಿದರು.

ಹೈಕಮಾಂಡ್ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಸಮೀಪದಿಂದ ಗಮನಿಸುತ್ತಿದ್ದು, ಯಾವುದೇ ಗೊಂದಲ ಕಂಡಿದ್ದರೆ ತಕ್ಷಣ ಮಧ್ಯಪ್ರವೇಶ ಮಾಡುತ್ತಿತ್ತು. ಹೈಕಮಾಂಡ್ ಸುಮ್ಮನಿರುವುದೇ ಇಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಅಭಿಮಾನಿಗಳು ಏನ್ ಆಸೆ ಪಡ್ತಾರೋ ಅದರಲ್ಲಿ ತಪ್ಪಿಲ್ಲ: ಪಕ್ಷದ ತೀರ್ಮಾನವೇ ಅಂತಿಮ

ಪಕ್ಷದೊಳಗೆ ಸಿಎಂ ಕುರ್ಚಿ ಕುರಿತ ಗೊಂದಲ ಇದ್ದಿದ್ದರೆ, ಸಿಎಲ್‌ಪಿ ಸಭೆಯಲ್ಲಿ ಶಾಸಕರು ಪ್ರಶ್ನೆ ಎತ್ತುತ್ತಿದ್ದರು. ಆದರೆ ಯಾರೂ ಆ ವಿಷಯ ಪ್ರಸ್ತಾಪಿಸಿಲ್ಲ. ಇದರಿಂದ ಪಕ್ಷದಲ್ಲಿ ಏಕತೆ ಇದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ: ಸಿಎಂ ಪುತ್ರ ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರು “ನಮ್ಮ ತಂದೆಯೇ ಐದು ವರ್ಷ ಸಿಎಂ” ಎಂದು ಹೇಳಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರು ಯಾವ ಮಾಹಿತಿ ಆಧರಿಸಿ ಹೇಳಿದ್ದಾರೆ ಗೊತ್ತಿಲ್ಲ. ಅಂತಿಮ ತೀರ್ಮಾನ ಹೈಕಮಾಂಡ್ ಕೈಯಲ್ಲಿದೆ,” ಎಂದು ಹೇಳಿದರು.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಕನ್ನಡ ಭಾಷಿಕರಿಗೆ ಸೂಕ್ತ ಸ್ಥಾನಮಾನದ ಭರವಸೆ

ಸದ್ಯಕ್ಕೆ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು, ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಮಾಧ್ಯಮಗಳು ಮಾತ್ರ ಗೊಂದಲ ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದೂ ಅವರು ತಿಳಿಸಿದರು.

ಮೈಸೂರಿನಲ್ಲಿ ಡ್ರಗ್ಸ್ ಪತ್ತೆಯಾಗಿಲ್ಲ: ಮೈಸೂರಿನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂಬ ಸುದ್ದಿಗಳ ಕುರಿತು ಮಾತನಾಡಿದ ಪರಮೇಶ್ವರ್, “ಮೈಸೂರಿನಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿಲ್ಲ. ಪೊಲೀಸರು ನೀಡಿರುವ ಮಾಹಿತಿ ಸರಿಯಾಗಿದೆ,” ಎಂದು ಸ್ಪಷ್ಟನೆ ನೀಡಿದರು. ಎನ್‌ಸಿಬಿ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಡ್ರಗ್ಸ್ ಸಿಕ್ಕಿಲ್ಲ ಎಂದು ಹೇಳಿದ್ದು, ಪತ್ರಿಕಾ ಪ್ರಕಟಣೆಯಲ್ಲಿ ಸಿಕ್ಕಿದೆ ಎಂದು ಹೇಳಿರುವುದು ಗೊಂದಲ ಸೃಷ್ಟಿಸಿದೆ. ಈ ದ್ವಂದ್ವ ಹೇಳಿಕೆಗೆ ಎನ್‌ಸಿಬಿಯೇ ಉತ್ತರ ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿ: ಉಡುಪಿ: ಬೈಂದೂರು ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

ಎನ್‌ಸಿಬಿ ದಾಳಿ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಅಧಿಕಾರಿಗಳು ಜೊತೆಯಲ್ಲೇ ಇದ್ದರು. ಈ ವೇಳೆ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ. ಆದರೂ ರಾಜ್ಯದ ಎಲ್ಲಾ ರಾಸಾಯನಿಕ ಕಾರ್ಖಾನೆಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಸಾಲಮನ್ನಾ ಸಮರ್ಥನೆ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲ ಮನ್ನಾ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಇದರಲ್ಲಿ ತಪ್ಪೇನೂ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದೆ ಕೂಡ ಸಾಲ ಮನ್ನಾ ಮಾಡಿವೆ. ರೈತರು, ಹಿಂದುಳಿದ ವರ್ಗಗಳ ಸಾಲ ಮನ್ನಾ ಮಾಡಿದಂತೆ, ಇದು ಸಹ ಸಾಮಾನ್ಯ ಪ್ರಕ್ರಿಯೆಯೇ,” ಎಂದು ಸಮರ್ಥಿಸಿಕೊಂಡರು. ಸಾಲ ತೀರಿಸಲು ಸಾಧ್ಯವಾಗದವರಿಗೆ ನೆರವಾಗುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಇದನ್ನೂ ಓದಿ: ದಾವಣಗೆರೆ ಮಾಜಿ ಶಾಸಕ ಮೋತಿ ವೀರಣ್ಣ ನಿಧನ

ಸಿಎಂ ಘೋಷಣೆಗೆ ಮಹತ್ವ ಕೊಡಬೇಡಿ: ನಗರದಲ್ಲಿ ಪೊಲೀಸ್ ಠಾಣೆ ಉದ್ಘಾಟನಾ ಸಂದರ್ಭದಲ್ಲಿ ಕಾರ್ಯಕರ್ತರು “ಮುಂದಿನ ಸಿಎಂ ಪರಮೇಶ್ವರ್” ಎಂದು ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಘೋಷಣೆ ಕೂಗಿದರೆ ಸಿಎಂ ಆಗಲು ಆಗುತ್ತಾ? ನಾನು ಹೋದ ಬಳಿಕ ಇನ್ನೊಬ್ಬರ ಹೆಸರನ್ನು ಕೂಗುತ್ತಾರೆ. ಹಾಗಾಗಿ ಇಂತಹ ಘೋಷಣೆಗೆ ಮಹತ್ವ ಕೊಡಬೇಡಿ,” ಎಂದು ಹೇಳಿದರು. ಎಲ್ಲೆಡೆ ನನಗೆ ಇದೇ ರೀತಿಯ ಘೋಷಣೆ ಕೇಳಿಬರುತ್ತದೆ. ಆದರೆ ಅಂತಿಮ ತೀರ್ಮಾನ ಪಕ್ಷದ ನಾಯಕತ್ವದ ಕೈಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

Previous articleಅಕ್ರಮ ಒತ್ತುವರಿ – ₹140 ಕೋಟಿ ಮೌಲ್ಯದ 7 ಎಕರೆ ಜಾಗ ವಶಕ್ಕೆ
Next articleರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ