Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ತೆಪ್ಪ ಮಗುಚಿದರೂ ಪಾರಾದ ಭಕ್ತರು

ತೆಪ್ಪ ಮಗುಚಿದರೂ ಪಾರಾದ ಭಕ್ತರು

0
338

ಬಳ್ಳಾರಿ: ತೆಕ್ಕಲಕೋಟೆ ಸಮೀಪದ ಹೆರಕಲ್ಲು ಗ್ರಾಮದ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ಮುಕ್ಕುಂದೆ ಗಡ್ಡೆ ಖಾದರ್ ಬಾಷಾ ಖಾದ್ರಿ ಅವರ 395ನೇ ವರ್ಷದ ಉರುಸು ಆಚರಿಸಲು ಆಗಮಿಸಿದ್ದ ಭಕ್ತರಿದ್ದ ತೆಪ್ಪ ಮುಳುಗಿದ ಘಟನೆ ನಡೆದಿದೆ.

ಅದೃಷ್ಟವಶಾತ್ ದಡದ ಸಮೀಪದಲ್ಲೇ ಈ ಘಟನೆ ನಡೆದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೇ ರೀತಿಯಾಗಿ ನಾಲ್ಕು ತೆಪ್ಪಗಳು ಮಗುಚಿಕೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲದೆ ನೆರೆಯ ಆಂಧ್ರ ಪ್ರದೇಶದಿಂದಲೂ ಸಾವಿರಾರು ಭಕ್ತರು ಉರುಸು ಆಚರಿಸಲು ಆಗಮಿಸುತ್ತಾರೆ. ಸಿರುಗುಪ್ಪ, ಕಂಪ್ಲಿ ಹಾಗೂ ತೆಕ್ಕಲಕೋಟೆ ಮಾರ್ಗವಾಗಿ ಉರುಸಿಗೆ ತೆರಳುವ ಭಕ್ತರಿಗೆ ಹೆರಕಲ್ಲು ಗ್ರಾಮದ ಬಳಿ ಇರುವ ಹರಿಗೋಲು ಘಾಟ್ ಮಾತ್ರ ಏಕೈಕ ಮಾರ್ಗವಾಗಿದ್ದು, ತುಂಗಭದ್ರಾ ನದಿಯನ್ನು ದಾಟಲು ತೆಪ್ಪಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

ಸಾವಿರಾರು ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು, ಕೇವಲ ಆರು ತೆಪ್ಪಗಳಷ್ಟೇ ಲಭ್ಯವಿವೆ, ಇದರಿಂದಾಗಿ ತೆಪ್ಪ ಹತ್ತಲು ಭಾರೀ ನೂಕುನುಗ್ಗಲು ಉಂಟಾಯಿತು. ಈ ವೇಳೆ ಒಂದೇ ತೆಪ್ಪದಲ್ಲಿ 20ಕ್ಕಿಂತಲೂ ಹೆಚ್ಚು ಜನ ಕುಳಿತ ಪರಿಣಾಮ ತೆಪ್ಪದಲ್ಲಿ ನೀರು ತುಂಬಿ ಮುಳುಗಿದ ಘಟನೆ ನಡೆಯಿತು. ಬುಧವಾರ ಗಂಧ, ಗುರುವಾರ ಉರುಸು ಹಾಗೂ ಶುಕ್ರವಾರ ಜಿಯಾರತ್ ಕಾರ್ಯಕ್ರಮಗಳು ನಡೆದವು.