ಬೆಳಗಾವಿ: ತಾಯಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಆಕೆ ಜತೆ ಪರಾರಿಯಾಗಿದ್ದ ವ್ಯಕ್ತಿಗೆ ಪುತ್ರನೊಬ್ಬ ಹತ್ತು ವರ್ಷದ ಬಳಿಕ 16 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ(49) ಎಂದು ಗುರುತಿಸಲಾಗಿದೆ. ಈರಯ್ಯ ಮಠಪತಿ(32) ಎಂಬಾತ ಈ ಅಮಾನುಷ ಕೃತ್ಯ ಎಸಗಿದ ಆರೋಪಿ.
ಬಸಪ್ಪ ಹೊಸಮನಿ 10 ವರ್ಷಗಳ ಹಿಂದೆ ಆರೋಪಿಯ ತಾಯಿ ಶಿವಮ್ಮ ಯಾನೆ ಸುವರ್ಣಾ ಸಂಗಯ್ಯಾ ಮಠಪತಿಯನ್ನು ಪ್ರೀತಿಯ ಬಲೆಗೆ ಬೀಳಿಸಿ, ಆಕೆಯನ್ನು ತನ್ನೊಂದಿಗೆ ಮಹಾರಾಷ್ಟ್ರಕ್ಕೆ ಕರೆದೊಯ್ದು ಅಲ್ಲಿಯೇ ಅವಳೊಂದಿಗೆ ಸಂಸಾರ ಮಾಡಿದ್ದ. ಆಗಿನ್ನೂ 21 ವರ್ಷದ ಹರೆಯದಲ್ಲಿದ್ದ ಈರಯ್ಯನ ಮೇಲೆ ಈ ಘಟನೆ ವಿಪರೀತ ಪರಿಣಾಮ ಬೀರಿತ್ತು. ತನ್ನ ತಂದೆ ಮತ್ತು ತಮ್ಮನ್ನೆಲ್ಲಾ ಬಿಟ್ಟು ಈತನೊಂದಿಗೆ ತಾಯಿ ಓಡಿಹೋಗುವುದಕ್ಕೆ ಚಾಲಾಕಿ ಬಸಪ್ಪನೇ ಕಾರಣ ಎಂದು ಆತನ ಮೇಲೆ ದ್ವೇಷ ಹೊಂದಿದ್ದ.
ಇತ್ತೀಚೆಗಷ್ಟೇ ಬಸಡೋಣಿಯ ಮನೆಗೆ ವಾಪಸ್ ಬಂದಿದ್ದ ಬಸಪ್ಪ ಸವದತ್ತಿ-ರಾಮದುರ್ಗ ರಸ್ತೆ ಮಧ್ಯ ಈರಯ್ಯನ ಕಣ್ಣಿಗೆ ಬಿದ್ದಿದ್ದಾನೆ. ಆತನನ್ನು ಮಾರ್ಗಮಧ್ಯೆ ಅಡ್ಡಗಟ್ಟಿ ಕೈಯಲ್ಲಿದ್ದ ಚಾಕುವಿನಿಂದ ಎದೆ, ಬೆನ್ನು, ಹೊಟ್ಟೆ, ಬಲ ಭುಜ ಹೀಗೆ ದೇಹದ ವಿವಿಧ ಭಾಗಗಳಿಗೆ ಸುಮಾರು 16ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ. ಇಷ್ಟಕ್ಕೇ ಸುಮ್ಮನಾಗದ ಈರಯ್ಯ ಸಿನಿಮೀಯ ಶೈಲಿಯಲ್ಲಿ ತಾನು ಕೊಲೆ ಮಾಡಿದ ಬಸಪ್ಪನ ಬೆನ್ನಿನ ಮೇಲೆ ಕಾಲಿಟ್ಟು ನಿಂತು ಪೋಸ್ ಕೊಟ್ಟು ಸ್ವತಃ ತಾನೇ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಕೊಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದ್ವೇಷದ ಕಾರಣ ಬಹಿರಂಗವಾಗಿದೆ. ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.






















