ಬೆಂಗಳೂರು: “ನಮ್ ಕಾಲ್ದಲ್ ಹಿಂಗಿರ್ಲಿಲ್ಲ ಬಿಡಿ…” ಇಂದಿನ ಯುವಜನಾಂಗ ಹಾಗೂ ಕಾಲಮಾನದ ಕುರಿತು ಮಾತನಾಡುವಾಗ ಅನೇಕ ಹಿರಿಯರು ನಗೆಮಾಡುತ್ತಾ ಹೇಳುವ ಈ ಮಾತೇ ಇದೀಗ ಕನ್ನಡ ಚಿತ್ರವೊಂದರ ಶೀರ್ಷಿಕೆಯಾಗಿದ್ದು, ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿ, ಇದೇ ಹೆಸರಿನೊಂದಿಗೆ ಸಿನಿಮಾ ರೂಪುಗೊಂಡಿರುವುದು ವಿಶೇಷ.
ಈ ಚಿತ್ರವು ಪೂರ್ಣ ಪ್ರಮಾಣದ ಔಟ್ ಅಂಡ್ ಔಟ್ ಕಾಮಿಡಿ ಕಥಾಹಂದರ ಹೊಂದಿದ್ದು, ಎರಡು ತಲೆಮಾರಿನ ಜನರ ನಡುವಿನ ಯೋಚನಾ ವ್ಯತ್ಯಾಸ, ಸಣ್ಣ ಸಂಘರ್ಷಗಳು, ಯಾವುದು ಸರಿ… ಯಾವುದು ತಪ್ಪು ಎಂಬ ಗೊಂದಲಗಳ ಸುತ್ತ ಕಥೆ ಹೆಣೆಯಲಾಗಿದೆ. ಈ ಎಲ್ಲ ಅಂಶಗಳನ್ನು ಗಂಭೀರತೆಯಿಲ್ಲದೆ, ನಗುನಗುತ್ತಾ ಮನರಂಜನಾತ್ಮಕವಾಗಿ ಪ್ರೇಕ್ಷಕರ ಮುಂದೆ ಇಡಲಾಗಿದೆ ಎಂದು ನಿರ್ದೇಶಕ ಎಸ್.ಎಸ್. ಅಮೋಘವರ್ಷ ತಿಳಿಸಿದ್ದಾರೆ.
ಇದನ್ನೂ ಓದಿ: ಹಂಸಲೇಖ-ಎಸ್.ಮಹೇಂದರ್ ಜೋಡಿಯ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್
“ಹಿರಿಯರು ಮತ್ತು ಇಂದಿನ ಯುವಜನಾಂಗದ ನಡುವೆ ಇರುವ ಮನಸ್ಥಿತಿಯ ಅಂತರ, ಅವರ ಮಾತು-ಆಲೋಚನೆಗಳ ಸಂಘರ್ಷವೇ ಚಿತ್ರದ ಹೃದಯ. ಅದನ್ನೇ ಹಾಸ್ಯ ರೂಪದಲ್ಲಿ, ಎಲ್ಲರೂ ತಮ್ಮನ್ನು ತಾವು ಕಂಡುಕೊಳ್ಳುವಂತೆ ಹೇಳುವ ಪ್ರಯತ್ನ ಮಾಡಿದ್ದೇವೆ” ಎಂಬುದು ನಿರ್ದೇಶಕರ ಅಭಿಪ್ರಾಯ.
ನಿರ್ಮಾಣ ಮತ್ತು ತಾರಾಗಣ: ಈ ಚಿತ್ರವನ್ನು ಹೊಯ್ಸಳ ಸಿನಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಘು ಹೊಯ್ಸಳ ಮತ್ತು ಅಮೋಘವರ್ಷ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿ ಅಮೋಘವರ್ಷವೇ ನಟಿಸಿದ್ದಾರೆ ಎಂಬುದು ಚಿತ್ರದ ಮತ್ತೊಂದು ವಿಶೇಷತೆ. ನಾಗರಾಜ್ ಜಿ.ಎನ್., ಪ್ರಮೀಳಾ ಪಿ., ಸುರೇಶ್ ಕೃಷ್ಣಮೂರ್ತಿ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಇದನ್ನೂ ಓದಿ: ಗಾಯಕಿ ಎಸ್. ಜಾನಕಿ ಪುತ್ರ ಮುರಳಿ ಕೃಷ್ಣ ನಿಧನ
ಚಿತ್ರದಲ್ಲಿ ರಿತ್ಯಾ, ರಾಘು ರಾಮನಕೊಪ್ಪ, ಜಯಪ್ರಕಾಶ್, ಯಶವಂತ ಶೆಟ್ಟಿ, ಅಕ್ಷಯ್, ತೀರ್ಥ ಪೊನ್ನು, ಚಂದ್ರಮೌಳಿ, ಹರಿ ಧನಂಜಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತಾಂತ್ರಿಕ ಬಳಗ: ಚಿತ್ರಕ್ಕೆ ಜಾನ್ ಮೊಜಾರ್ಟ್ ಸಂಗೀತ ನೀಡಿದ್ದು, ಚೇತನ್ ನಾಯ್ಕ್, ದೀಕ್ಷಾ ರಾಮಕೃಷ್ಣ ಹಾಗೂ ಆಶಾ ಭಟ್ ಧ್ವನಿಯಾಗಿದ್ದಾರೆ. ಕಾರ್ಟ್ ಲೀವ್ಸ್ ನುತಾರೆ ಛಾಯಾಗ್ರಹಣ ಮತ್ತು ಸಂಕಲನದ ಹೊಣೆ ಹೊತ್ತಿದ್ದಾರೆ.
ಇದನ್ನೂ ಓದಿ: ರಕ್ಕಸಪುರದೋಳ್ ಹಾಡಿಗೆ ಜೋಗಿ ಪ್ರೇಮ್ ಧ್ವನಿ
ಚಿತ್ರೀಕರಣ ಮತ್ತು ಬಿಡುಗಡೆ ಯೋಜನೆ: ಬೆಂಗಳೂರು ಹಾಗೂ ಮೇಲುಕೋಟೆ ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಿದ್ದು, ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೇ ವರ್ಷದ ಮಧ್ಯ ಭಾಗದೊಳಗೆ ಚಿತ್ರವನ್ನು ತೆರೆಗೆ ತರುವ ಯೋಜನೆಯನ್ನು ಚಿತ್ರತಂಡ ಹೊಂದಿದೆ.
ಸಾಮಾನ್ಯ ಮಾತಿನಿಂದಲೇ ಶೀರ್ಷಿಕೆ ಪಡೆದು, ಎರಡು ತಲೆಮಾರಿನ ನಡುವಿನ ಯೋಚನೆಗಳ ವ್ಯತ್ಯಾಸವನ್ನು ನಗುನಗುತ್ತಾ ಹೇಳುವ ‘ನಮ್ ಕಾಲ್ದಲ್ ಹಿಂಗಿರ್ಲಿಲ್ಲ ಬಿಡಿ…’ ಸಿನಿಮಾ, ಯುವಜನಾಂಗಕ್ಕೂ ಹಿರಿಯರಿಗೂ ಸಮಾನವಾಗಿ ಸಂಪರ್ಕ ಸಾಧಿಸುವ ನಿರೀಕ್ಷೆ ಮೂಡಿಸಿದೆ.























