ಸತೀಶ್ ನೀನಾಸಂ ನಟನೆಯ ನಿರೀಕ್ಷಿತ ಸಿನಿಮಾ ‘ದ ರೈಸ್ ಆಫ್ ಅಶೋಕ’ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಒಂದರ ಹಿಂದೊಂದು ಹಾಡನ್ನು ರಿಲೀಸ್ ಮಾಡುತ್ತಿರುವ ಚಿತ್ರತಂಡ, ಇತ್ತೀಚೆಗೆ ಮಾದೇವ… ಹಾಗೂ ಯಾಕೋ ಯಾಕೋ… ಹಾಡನ್ನು ಬಿಡುಗಡೆ ಮಾಡಿತ್ತು. ಎಲ್ಲಾ ಭಾಷೆಗಳಲ್ಲೂ ಆ ಹಾಡುಗಳು ಗಮನ ಸೆಳೆದಿದ್ದವು. ಇದೀಗ ಮತ್ತೊಂದು ಹಾಡನ್ನು ಹರಿಬಿಟ್ಟಿದೆ ಟೀಂ ‘ಅಶೋಕ’.
ಕಲ್ಯಾಣವೇ ಗೌರಿ… ಎಂಬ ಜನಪದ ಹಾಡನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಕನ್ನಡದಲ್ಲಿ ಪಂಚಮ್ ಜೀವ ಹಾಗೂ ಶ್ವೇತಾ ಹಿರೇಮಠ್ ದನಿಗೂಡಿಸಿದ್ದಾರೆ.
ತಮಿಳಿನಲ್ಲಿ ಮೋನಿಶ್ ಕುಮಾರ್ ಸಾಹಿತ್ಯ, ಪಂಚಮ್ ಜೀವ ಹಾಗೂ ಅನಿತಾ ಸಾ.ರಾ.ಮಹೇಶ್ ಹಾಡಿದ್ದಾರೆ. ಹಾಗೆಯೇ ತೆಲುಗಿನಲ್ಲಿ ಜಯಚಂದ್ರ ಜೆ.ಡಿ ಸಾಹಿತ್ಯ ಬರೆದಿದ್ದು, ಪಂಚಮ್ ಜೀವ ಹಾಗೂ ಸತ್ಯವಾಣಿ ಕಂಠಸಿರಿಯಲ್ಲಿ ಮೂಡಿಬಂದಿದೆ.
ಮದುವೆ ಸಂದರ್ಭದಲ್ಲಿ ಮೂಡಿಬರುವ ಈ ಹಾಡನ್ನು ಸಂಪೂರ್ಣವಾಗಿ ದೇಸಿ ಸೊಗಡಿನಲ್ಲಿ ಕಟ್ಟಿಕೊಡಲಾಗಿದೆ. ಅಲ್ಲದೇ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ಹಿಟ್ಸ್ ದಾಖಲಿಸಿ, ಟ್ರೆಂಡಿಂಗ್‌ನಲ್ಲಿದೆ.
ಈ ಸಿನಿಮಾಕ್ಕೆ ನಟನೆಯ ಜತೆಗೆ ಸಾಹಿತ್ಯ, ಗಾಯನ ಹಾಗೂ ನಿರ್ಮಾಣದಲ್ಲೂ ಸತೀಶ್ ತೊಡಗಿಸಿಕೊಂಡಿದ್ದಾರೆ. ಸಪ್ತಮಿ ಗೌಡ ಈ ಚಿತ್ರದ ನಾಯಕಿ. ‘ದ ರೈಸ್ ಆಫ್ ಅಶೋಕ’ ೭೦ರ ಕಾಲಘಟ್ಟದಲ್ಲಿ ನಡೆಯುವಂಥ ಕಥೆಯಾಗಿದ್ದು, ಕ್ರಾಂತಿಕಾರಿ ಯುವಕನ ಹೋರಾಟ, ಬದುಕು, ಸಂಘರ್ಷ ಈ ಚಿತ್ರದಲ್ಲಿದೆ.
ನಿರ್ದೇಶಕ ವಿನೋದ್ ವಿ ಧೋಂಡಾಳೆ ಅಕಾಲಿಕ ಮರಣದ ನಂತರ ಮನು ಶೇಡ್ಗಾರ್ ‘ದ ರೈಸ್ ಆಫ್ ಅಶೋಕ’ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ವೃದ್ಧಿ ಕ್ರಿಯೇಷನ್ ಮತ್ತು ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ಸತೀಶ್ ನೀನಾಸಂ ಹಾಗೂ ವರ್ಧನ್ ಹರಿ, ಜೈಷ್ಣವಿ ‘ಅಶೋಕ’ನಿಗೆ ಬಂಡವಾಳ ಹೂಡಿದ್ದಾರೆ.
ಬಿ.ಸುರೇಶ, ಸಂಪತ್ ಮೈತ್ರೇಯ, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಯಶ್ ಶೆಟ್ಟಿ ಮೊದಲಾದವರು ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ. ದಯಾನಂದ್ ಟಿ.ಕೆ ಕಥೆ ಹಾಗೂ ಲವಿತ್ ಛಾಯಾಗ್ರಹಣ ಈ ಚಿತ್ರಕ್ಕಿದೆ.























