ಸಿನಿ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಕಾಯ್ದೆ ಜಾರಿ

ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ( ಕ್ಷೇಮಾಭಿವೃದ್ಧಿ) ಅಧಿನಿಯಮ- 2024 ಕ್ಕೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾದ ಈ ಮಸೂದೆಯನ್ನು ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ವಾಪಸ್​ ಕಳುಹಿಸಿದ್ದರು.‌ ಬಳಿಕ ಸರ್ಕಾರ ವಿವರಣೆ ನೀಡಿದ್ದು, ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಿದ್ದಾರೆ. ಇದೀಗ ಕಾಯ್ದೆ ಜಾರಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.‌ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ( ಕ್ಷೇಮಾಭಿವೃದ್ಧಿ) ಅಧಿನಿಯಮ- 2024 ಕ್ಕೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರ ಅನ್ವಯ ರಾಜ್ಯದಲ್ಲಿ ಕ್ಷೇಮಾಭಿವೃದ್ಧಿ ಮಂಡಳಿಯನ್ನು ರಚಿಸುವ ಮೂಲಕ ಸಿನಿ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಹಾಗೂ ಅವರ ಕ್ಷೇಮಾಭಿವೃದ್ಧಿಗೆ ವಿಶೇಷ ಪ್ರಾಧಾನ್ಯತೆ ನೀಡಲು ಅವಕಾಶವಾಗಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದಿದ್ದಾರೆ. ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಕ್ಷೇಮಾಭಿವೃದ್ಧಿ ಮಂಡಳಿ ರಚನೆಯಾಗಲಿದೆ. ಕಾರ್ಮಿಕ ಸಚಿವ, ಕಾರ್ಮಿಕ ಇಲಾಖೆ ಪ್ರಧಾನ/ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಆಯುಕ್ತರು, ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತ 17 ಸದಸ್ಯರನ್ನು ಒಳಗೊಂಡ ಮಂಡಳಿ ರಚನೆಯಾಗಲಿದೆ. ಇದರ ಮೂಲಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರನ್ನು ನೋಂದಣಿ ಮಾಡಿಸಿ, ಅವರಿಗೆಲ್ಲ ಗುರುತಿನ ಚೀಟಿ ಕೊಟ್ಟು, ಆರೋಗ್ಯ ವಿಮೆ, ಜೀವವಿಮೆ ಮತ್ತಿತರ ಸಾಮಾಜಿಕ ಭದ್ರತೆ ನೀಡುವ ಅಂಶಗಳನ್ನು ಕಾಯ್ದೆ ಒಳಗೊಂಡಿದೆ.