SK Home Ad
Home ಸಿನಿ ಮಿಲ್ಸ್ ಕಾಂತಾರಾ ಚಾಪ್ಟರ್-1ಗೆ ಅಂತಾರಾಷ್ಟ್ರೀಯ ಗೌರವ: ರಿಷಬ್ ಶೆಟ್ಟಿಗೆ ಎರಡು ಪ್ರಶಸ್ತಿ

ಕಾಂತಾರಾ ಚಾಪ್ಟರ್-1ಗೆ ಅಂತಾರಾಷ್ಟ್ರೀಯ ಗೌರವ: ರಿಷಬ್ ಶೆಟ್ಟಿಗೆ ಎರಡು ಪ್ರಶಸ್ತಿ

0
5

ಪಣಜಿ: 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಕನ್ನಡದ ಹೆಮ್ಮೆಯ ಚಿತ್ರ ʻಕಾಂತಾರಾ ಚಾಪ್ಟರ್-1’ಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಚಿತ್ರದ ನಟನೆ ಮತ್ತು ನಿರ್ದೇಶನಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಸ್ಪೆಷಲ್ ಮೆನ್ಷನ್ ಅವಾರ್ಡ್ ಹಾಗೂ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಗೋವಾದ ಬಾಂಬೋಲಿಂ ಬಳಿಯ ಶ್ಯಾಮಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿ ಶನಿವಾರ ಸಂಜೆ ನಡೆದ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್ ಶೆಟ್ಟಿ, ಗೋವಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಬೃಹತ್ ವೇದಿಕೆಯಾಗಿದೆ. ಇಲ್ಲಿ ಚಲನಚಿತ್ರ ನಿರ್ಮಾಣದ ಬಗ್ಗೆ ಕಲಿಯಲು ಅವಕಾಶವಿದೆ. ಇಂತಹ ಉತ್ಸವಗಳಲ್ಲಿ ಅಪರೂಪದ ಹಾಗೂ ವಿಭಿನ್ನ ಅಭಿರುಚಿಯ ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ, ಗೋವಾದಲ್ಲಿ ಪ್ರತಿವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಒಂಬತ್ತು ದಿನಗಳ ಈ ಉತ್ಸವದಲ್ಲಿ ಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳು ಹಾಗೂ ಚಲನಚಿತ್ರ ಕ್ಷೇತ್ರದ ಗಣ್ಯರು ಭಾಗವಹಿಸಿದ್ದಾರೆ. ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.

ಇತರ ಪ್ರಶಸ್ತಿ ವಿಜೇತರು: ಚಲನಚಿತ್ರೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಕಲಾವಿದರು ಹಾಗೂ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ಡಾ. ವಿಶಾಲ್ ಚತುರ್ವೇದಿ, ʻದಿ ಗೋಲ್ಡನ್ ಏಜ್’ ಚಿತ್ರಕ್ಕಾಗಿ ಅಕಲಾಗ್ ಡೋರ್ ಅವರಿಗೆ ಸಿಲ್ವರ್ ಪೀಕಾಕ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನಟಿಯಾಗಿ ಮಾಯಾ ಓರೊಕ್, ಅತ್ಯುತ್ತಮ ನಿರ್ದೇಶಕ ವಿಭಾಗದ ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ವೋಲ್ಕಾರ್ ಶೋಲ್ಡರ್ಪ್ ಹಾಗೂ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ʻದಿ ರಿವರ್ ಟ್ರೇನ್’ ಚಿತ್ರ ಪಡೆದುಕೊಂಡಿತು. ಗೋಲ್ಡನ್ ಪೀಕಾಕ್ ಪ್ರಶಸ್ತಿ ʻಅಕ್ವಿ’ ಚಿತ್ರಕ್ಕೆ ಲಭಿಸಿತು.

ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ಉತ್ಸವದ ನಿರ್ದೇಶಕ ಅಶುತೋಷ್ ಗೋವಾರಿಕರ್ ಸೇರಿದಂತೆ ದೇಶ-ವಿದೇಶಗಳ ಖ್ಯಾತ ನಟ-ನಟಿಯರು, ನಿರ್ದೇಶಕರು ಹಾಗೂ ತಂತ್ರಜ್ಞರು ಭಾಗವಹಿಸಿದ್ದರು. ಭಾರತೀಯ ಚಿತ್ರರಂಗದ ವೈವಿಧ್ಯತೆಯನ್ನು ಬಿಂಬಿಸುವ ಸಂಗೀತ ಮತ್ತು ನೃತ್ಯ ಪ್ರದರ್ಶನಗಳು ಸಮಾರಂಭಕ್ಕೆ ಮೆರುಗು ನೀಡಿದವು.

ನವೆಂಬರ್ 20ರಂದು ಗೋವಾದಲ್ಲಿ ವರ್ಣರಂಜಿತವಾಗಿ ಆರಂಭವಾಗಿದ್ದ ಒಂಬತ್ತು ದಿನಗಳ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್ 28ರಂದು ಸಂಪನ್ನಗೊಂಡಿತು. ಉತ್ಸವದಲ್ಲಿ 86 ದೇಶಗಳ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರಗಳು ಹಾಗೂ ಭಾರತೀಯ ಪನೋರಮಾ ವಿಭಾಗದಡಿ 18 ಭಾಷೆಗಳ 76 ಭಾರತೀಯ ಚಿತ್ರಗಳು ಪ್ರದರ್ಶನಗೊಂಡವು.