SK Home Ad
Home ಸುದ್ದಿ ದೇಶ ವಾಹನ ಸವಾರರಿಗೆ ಕೇಂದ್ರದ ಎಚ್ಚರಿಕೆ: ಟೋಲ್ ಶುಲ್ಕ ತಪ್ಪಿಸಿದರೆ 5 ಪಟ್ಟು ದಂಡ

ವಾಹನ ಸವಾರರಿಗೆ ಕೇಂದ್ರದ ಎಚ್ಚರಿಕೆ: ಟೋಲ್ ಶುಲ್ಕ ತಪ್ಪಿಸಿದರೆ 5 ಪಟ್ಟು ದಂಡ

0
47

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ನಂಬರ್ ಪ್ಲೇಟ್ ಮರೆಮಾಚುವ ಅಥವಾ ತಿರುಚುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ. ಇಂತಹ ಕೃತ್ಯ ಎಸಗುವ ವಾಹನಗಳ ಮಾಲೀಕರಿಗೆ ಮೂಲ ಟೋಲ್ ಶುಲ್ಕದ ಐದು ಪಟ್ಟು ದಂಡ ವಿಧಿಸುವ ಹೊಸ ನಿಯಮ ಜಾರಿಗೆ ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕ್ರಮ ಕೈಗೊಂಡಿದೆ.

ವಾಹನಗಳ ನಂಬರ್ ಪ್ಲೇಟ್ ಕಾಣದಂತೆ ಬಟ್ಟೆ ಕಟ್ಟುವುದು, ಪೇಪರ್ ಅಥವಾ ಕಪ್ಪು ಬಣ್ಣದ ಸ್ಟಿಕ್ಕರ್ ಅಂಟಿಸುವುದು, ಮಣ್ಣು ಬಳಿಯುವುದು ಹಾಗೂ ನಂಬರ್ ಪ್ಲೇಟ್ ಕೆಳಕ್ಕೆ ಬಗ್ಗಿಸಿ ಅಕ್ಷರಗಳು ಕಾಣದಂತೆ ಮಾಡುವುದನ್ನು ಗಂಭೀರ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಉದಾಹರಣೆಗೆ, ಒಂದು ವಾಹನದ ಟೋಲ್ ಶುಲ್ಕ 100 ರೂ. ಇದ್ದರೆ, ಶುಲ್ಕ ತಪ್ಪಿಸಲು ನಂಬರ್ ಪ್ಲೇಟ್ ಮರೆಮಾಚಿದ ವಾಹನದ ಮಾಲೀಕರು 500 ರೂ. ದಂಡ ಸೇರಿ ಒಟ್ಟು 600 ರೂ. ಪಾವತಿಸಬೇಕಾಗುತ್ತದೆ.

ಇನ್ನು ವಾಹನಗಳು ವೇಗವಾಗಿ ಸಂಚರಿಸಲು ಅನುಕೂಲವಾಗುವಂತೆ ನಿರ್ಮಿಸಲಾಗುತ್ತಿರುವ ಬ್ಯಾರಿಯರ್‌ಲೆಸ್ ಟೋಲ್ ಪ್ಲಾಜಾಗಳಲ್ಲಿಯೂ ಈ ನಿಯಮ ಅನ್ವಯವಾಗಲಿದೆ. ಕೃತ್ಯಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳು, ಆರ್‌ಎಫ್‌ಐಡಿ ರೀಡರ್‌ಗಳು ಹಾಗೂ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ವ್ಯವಸ್ಥೆಯನ್ನು ಬಳಸಲಾಗುತ್ತದೆ.

ಫಾಸ್ಟ್‌ಟ್ಯಾಗ್ ರೀಡರ್ ಮತ್ತು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆಹಚ್ಚಿ, ಸಂಬಂಧಿತ ಟೋಲ್ ಶುಲ್ಕದ ಜೊತೆಗೆ ಐದು ಪಟ್ಟು ದಂಡವನ್ನು ವಿಧಿಸಲಾಗುತ್ತದೆ. ದಂಡದ ಮೊತ್ತವನ್ನು ಸಂಬಂಧಿತ ಪ್ರಾಧಿಕಾರಕ್ಕೆ ವರ್ಗಾಯಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಎಂಎಲ್‌ಎಫ್‌ಎಫ್ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ಥಳಗಳಲ್ಲಿಯೂ ಈ ನಿಯಮ ಅನ್ವಯವಾಗಲಿದ್ದು, ಭವಿಷ್ಯದಲ್ಲಿ ಆರಂಭವಾಗುವ ಹೊಸ ಟೋಲ್ ಕೇಂದ್ರಗಳಿಗೂ ವಿಸ್ತರಿಸಲಾಗುತ್ತದೆ. ಆದರೆ, ಉದ್ದೇಶಪೂರ್ವಕವಾಗಿ ಟೋಲ್ ಶುಲ್ಕ ತಪ್ಪಿಸಿರುವುದಕ್ಕೆ ಪುರಾವೆಗಳಿದ್ದಾಗ ಮಾತ್ರ ಈ ದಂಡದ ನಿಯಮ ಅನ್ವಯವಾಗಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.