SK Home Ad
Home ಸುದ್ದಿ ರಾಜ್ಯ ಸರ್ಕಾರದ ಭರವಸೆ ಸಾಕಾಗಲ್ಲ, ಲಿಖಿತ ಆದೇಶ ಬರುವವರೆಗೂ ಜಾಗ ಬಿಡಲ್ಲ: ಮತ್ತೆ ಹೋರಾಟ ಮುಂದುವರಿಸಿದ ಆಶಾ...

ಸರ್ಕಾರದ ಭರವಸೆ ಸಾಕಾಗಲ್ಲ, ಲಿಖಿತ ಆದೇಶ ಬರುವವರೆಗೂ ಜಾಗ ಬಿಡಲ್ಲ: ಮತ್ತೆ ಹೋರಾಟ ಮುಂದುವರಿಸಿದ ಆಶಾ ಕಾರ್ಯಕರ್ತರು

0
11

ಬೆಂಗಳೂರು: ಸರ್ಕಾರದ ಭರವಸೆಗೆ ಆಶಾ ಕಾರ್ಯಕರ್ತೆಯರು ತಕ್ಷಣವೇ ಮಣಿಯಲು ಸಿದ್ಧರಿಲ್ಲ. ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಅಧಿಕೃತ ಲಿಖಿತ ಆದೇಶ ಕೈ ಸೇರುವವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರ ಸಂಘಟನೆ ಕಾರ್ಯದರ್ಶಿ ನಾಗಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಪ್ರತಿಭಟನಾ ಸ್ಥಳದಲ್ಲಿ ಕಾರ್ಯಕರ್ತೆಯರನ್ನುದ್ದೇಶಿಸಿ ಮಾತನಾಡಿದ ಅವರು, 12 ದಿನಗಳ ಹೋರಾಟ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ʻನಮ್ಮ ಹೋರಾಟ ಸಾಮಾನ್ಯವಾದದ್ದಲ್ಲ. 12 ದಿನಗಳ ಕಾಲ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ಬಂಡೆಯನ್ನೇ ಕರಗಿಸಿದ್ದೇವೆ. ಹೋರಾಟದಲ್ಲಿ ಭಾಗಿಯಾದ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಸರ್ಕಾರ ನೀಡಿರುವ ಭರವಸೆ ಮಾತ್ರ ಸಾಕಾಗುವುದಿಲ್ಲ. ಅದಕ್ಕೆ ಅಧಿಕೃತ ರೂಪ ಸಿಗಬೇಕು’ ಎಂದು ಹೇಳಿದರು.

ಮುಖ್ಯಮಂತ್ರಿಗಳೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಕಾರ್ಯಕರ್ತೆಯರು ಸಂಪೂರ್ಣ ಒಪ್ಪಿಗೆ ಸೂಚಿಸಿಲ್ಲ. ಲಿಖಿತ ಆದೇಶ ನೀಡುವಂತೆ ನಾವು ಮೊದಲಿನಿಂದಲೂ ಒತ್ತಾಯಿಸುತ್ತಿದ್ದೇವೆ. ಆರೋಗ್ಯ ಇಲಾಖೆಯಿಂದ ಅಧಿಕೃತ ಆದೇಶ ಹೊರಬರುವುದಾಗಿ ತಿಳಿಸಲಾಗಿದೆ. ಅದು ನಮ್ಮ ಕೈ ಸೇರುವವರೆಗೂ ಹೋರಾಟದ ಸ್ಥಳವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಸರ್ಕಾರದ ನಿರ್ಧಾರದಿಂದ ತೃಪ್ತರಾಗಿದ್ದೀರಾ ಅಥವಾ ಹೋರಾಟ ಮುಂದುವರಿಸಬೇಕೆ ಎಂಬುದನ್ನು ಕಾರ್ಯಕರ್ತೆಯರನ್ನೇ ಪ್ರಶ್ನಿಸಿದ ನಾಗಲಕ್ಷ್ಮಿ, ಮುಂದಿನ ನಿರ್ಧಾರವನ್ನು ಒಗ್ಗಟ್ಟಿನಿಂದ ಕೈಗೊಳ್ಳುವಂತೆ ಕರೆ ನೀಡಿದರು. ಸರ್ಕಾರದ ಮೇಲೆ ಸಾಕಷ್ಟು ಹೊಣೆಗಾರಿಕೆಯಿದ್ದು, ಘೋಷಣೆಗಳು ಕೇವಲ ಭರವಸೆಯಾಗಿ ಉಳಿಯದೆ ಆದೇಶದ ರೂಪದಲ್ಲಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.