ಚಿತ್ರದುರ್ಗ: ಹಿರಿಯೂರು ಉಪಚುನಾವಣೆ 6 ತಿಂಗಳೊಳಗೆ ನಡೆಸಬೇಕಾಗಿತ್ತು. ಇಲ್ಲಿಯವರೆಗೆ ಘೋಷಣೆ ಆಗಿಲ್ಲದಿರುವುದು ಗಮನಿಸಿದರೆ ಎಲೆಕ್ಷನ್ ನಡೆಯುತ್ತೋ, ಇಲ್ಲವೋ ಎಂಬ ಸಂಶಯ ಎದುರಾಗಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಆಯೋಗ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಎಸ್ಐಆರ್ ನಡೆಯುತ್ತಿದೆ. ಹಿರಿಯೂರು ಕ್ಷೇತ್ರದಲ್ಲಿ ಶಾಸಕರಿಲ್ಲದೆ 6 ತಿಂಗಳು ಪೂರ್ಣಗೊಂಡಿದೆ ಎಂದರು.
ನಾವಂತೂ ಚುನಾವಣೆಗೆ ಸಿದ್ಧರಾಗಿದ್ದೇವೆ. ಗೆಲ್ಲಲು ಎಲ್ಲ ರೀತಿ ತಂತ್ರಗಾರಿಕೆ ಮಾಡಿದ್ದೇವೆ ಎಂದರು. ಸಿಎಂ ಡಿ.ಕೆ. ಶಿವಕುಮಾರ್ ಪದೇ ಪದೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ರಾಜಕೀಯ ಉದ್ದೇಶವೆಂಬ ಆರೋಪ ಎದುರಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಂಜನೇಯ, ಎಲ್ಲರೂ ಗೆಲ್ಲಲು ರಾಜಕೀಯ ಮಾಡುತ್ತಾರೆ. ಅದರಲ್ಲಿ ವಿಶೇಷ ಇಲ್ಲ ಎಂದರು.
ಡಿ. ಸುಧಾಕರ್ ಅವರಿಗೆ ಡಿಕೆಶಿ ರಾಜಕೀಯ ಗುರು. ಈ ಕಾರಣಕ್ಕೆ ಅವರ ಕುಟುಂಬದೊಂದಿಗೆ ಮುಖ್ಯಮಂತ್ರಿ ಹೆಚ್ಚು ಒಟನಾಟ ಹೊಂದಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ಗೆಲ್ಲಲು ಅವರು ಪದೇ ಪದೆ ಭೇಟಿ ನೀಡುವುದು ತಪ್ಪಲ್ಲ. ಸುಹಾಸ್ ಅಥವಾ ಮಾಜಿ ಶಾಸಕಿ ಕೆ.ಪೂರ್ಣಿಮಾ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ದೊರೆಯಲಿದ್ದು, ಯಾರಿಗೆ ಕೊಟ್ಟರೂ ಗೆಲುವು ಖಚಿತ ಎಂದರು.






















