SK Home Ad
Home ಸುದ್ದಿ ದೇಶ ತಿಮ್ಮಪ್ಪನಿಗೆ 121 ಕೆ.ಜಿ. ಚಿನ್ನ ಕೊಟ್ಟ ವರ್ಧಮಾನ್ ಜೈನ್ ಯಾರು?

ತಿಮ್ಮಪ್ಪನಿಗೆ 121 ಕೆ.ಜಿ. ಚಿನ್ನ ಕೊಟ್ಟ ವರ್ಧಮಾನ್ ಜೈನ್ ಯಾರು?

0
32

ಚೆನ್ನೈ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನಾಭರಣಗಳನ್ನು ಸಮರ್ಪಿಸಿರುವ ಉದ್ಯಮಿ ವರ್ಧಮಾನ್ ಜೈನ್ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಉದ್ಯಮಿಯಾಗಿ ಮಾತ್ರವಲ್ಲದೆ, ಆರೋಗ್ಯ ಸೇವಾ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು, ‘ಆಕ್ಸೆಸ್ ಹೆಲ್ತ್‌ಕೇರ್’ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷರಾಗಿದ್ದಾರೆ.

ಡೆಲ್‌ನಿಂದ ಉದ್ಯಮಶೀಲತೆಯವರೆಗೆ: ವರ್ಧಮಾನ್ ಜೈನ್ ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಡೆಲ್ ಸಂಸ್ಥೆಯೊಂದಿಗೆ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಡೆಲ್ ಸರ್ವಿಸಸ್‌ನ ಜಾಗತಿಕ ಬಿಪಿಒ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಆರೋಗ್ಯ ಸೇವೆ, ವಿಮೆ, ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳ 100ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುವ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದರು. ಸುಮಾರು 9,000 ಸಿಬ್ಬಂದಿಯ ಜಾಗತಿಕ ಕಾರ್ಯಾಚರಣೆಗಳ ನಿರ್ವಹಣೆಯ ಅನುಭವ ಅವರಿಗಿದೆ.

ಇದಕ್ಕೂ ಮೊದಲು ಅವರು ವಿಷನ್ ಹೆಲ್ತ್‌ಸೋರ್ಸ್ (Vision HealthSource) ಸಂಸ್ಥೆಯ ಸಹ-ಸಂಸ್ಥಾಪಕರಾಗಿದ್ದರು. 2003ರಲ್ಲಿ ಈ ಸಂಸ್ಥೆಯನ್ನು ಪೆರೋಟ್ ಸಿಸ್ಟಮ್ಸ್ ಸ್ವಾಧೀನಪಡಿಸಿಕೊಂಡಿತ್ತು. ಬಳಿಕ ಡೆಲ್ ಸರ್ವಿಸಸ್‌ನೊಂದಿಗೆ ವಿಲೀನಗೊಂಡ ಕಾರ್ಯಾಚರಣೆಗಳಲ್ಲಿ ಜೈನ್ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಕ್ರಾಂತಿ: 2011ರಲ್ಲಿ ಸ್ಥಾಪನೆಯಾದ ಆಕ್ಸೆಸ್ ಹೆಲ್ತ್‌ಕೇರ್ ಸಂಸ್ಥೆಯ ಬೆಳವಣಿಗೆಯಲ್ಲಿ ವರ್ಧಮಾನ್ ಜೈನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳಿಗೆ ವೈದ್ಯಕೀಯ ಬಿಲ್ಲಿಂಗ್, ವೈದ್ಯಕೀಯ ಕೋಡಿಂಗ್, ವಿಮಾ ಕ್ಲೇಮ್ ನಿರ್ವಹಣೆ ಹಾಗೂ ಹಣಕಾಸು ಪ್ರಕ್ರಿಯೆಗಳ ನಿರ್ವಹಣೆಗೆ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಈ ಸಂಸ್ಥೆ ಒದಗಿಸುತ್ತದೆ.

ಕೃತಕ ಬುದ್ಧಿಮತ್ತೆ (AI), ಮಷಿನ್ ಲರ್ನಿಂಗ್ ಮತ್ತು ರೊಬೊಟಿಕ್ ಪ್ರೊಸೆಸ್ ಆಟೊಮೇಷನ್ (RPA) ತಂತ್ರಜ್ಞಾನಗಳ ಬಳಕೆಯ ಮೂಲಕ ಆರೋಗ್ಯ ಸೇವೆಗಳ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡಿದ್ದಾರೆ. ವೈದ್ಯಕೀಯ ಚಿತ್ರಗಳ ಸಂಸ್ಕರಣೆ ಮತ್ತು ಎಲೆಕ್ಟ್ರಾನಿಕ್ ಚಿತ್ರಗಳಲ್ಲಿನ ಮಾಹಿತಿಯನ್ನು ಬಳಸುವ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪೇಟೆಂಟ್‌ಗಳನ್ನು ಕೂಡ ಹೊಂದಿದ್ದಾರೆ.

ಶಿಕ್ಷಣ, ಆರೋಗ್ಯ ಸೇವೆಯಲ್ಲೂ ಆಸಕ್ತಿ: ವ್ಯವಹಾರದ ಜತೆಗೆ ಸಾಮಾಜಿಕ ಸೇವೆಯಲ್ಲೂ ವರ್ಧಮಾನ್ ಜೈನ್ ಆಸಕ್ತಿ ಹೊಂದಿದ್ದಾರೆ. ಶೈಕ್ಷಣಿಕವಾಗಿ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಅಂಕಿ-ಅಂಶಶಾಸ್ತ್ರ ಮತ್ತು ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡಿದ್ದಾರೆ.

ಶ್ರೀ ಸರಿತಾ ಜೈನ್ ಫೌಂಡೇಶನ್ ಟ್ರಸ್ಟ್ ಮೂಲಕ ಬಡ ಮಕ್ಕಳ ಶಿಕ್ಷಣ, ಹಸಿವು ನಿವಾರಣೆ ಮತ್ತು ತುರ್ತು ವೈದ್ಯಕೀಯ ನೆರವಿನ ಕಾರ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ. ಹಿಂದುಳಿದ ಯುವಕರಿಗೆ ಉದ್ಯೋಗಾಧಾರಿತ ಕೌಶಲ ತರಬೇತಿ ನೀಡುವ ‘ಆವಿಷ್ಕಾರ್’ ಯೋಜನೆಯನ್ನೂ ಆರಂಭಿಸಿದ್ದಾರೆ. ಕಾಂಚಿ ಕಾಮಕೋಟಿ ಚೈಲ್ಡ್ಸ್ ಟ್ರಸ್ಟ್ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

2025ರಲ್ಲಿ ಆಕ್ಸೆಸ್ ಹೆಲ್ತ್‌ಕೇರ್‌ನಲ್ಲಿ ತಮ್ಮ ಪಾಲಿನ ಸುಮಾರು ಶೇ. 70ರಷ್ಟು ಷೇರುಗಳನ್ನು ಅಮೆರಿಕದ ನ್ಯೂ ಮೌಂಟೇನ್ ಕ್ಯಾಪಿಟಲ್ ಸಂಸ್ಥೆಗೆ ಮಾರಾಟ ಮಾಡಿದ ವ್ಯವಹಾರವೂ ಅವರ ಉದ್ಯಮದ ಪಯಣದಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಈ ವ್ಯವಹಾರದ ಕಂಪನಿಯ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಎಂದು ವರದಿಯಾಗಿತ್ತು.

121 ಕೆ.ಜಿ. ಚಿನ್ನ ಸಮರ್ಪಣೆ: ಇದೀಗ ಪತ್ನಿ ರಾಧಿಕಾ ಜೈನ್ ಅವರೊಂದಿಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ 121 ಕೆ.ಜಿ. ಚಿನ್ನಾಭರಣಗಳನ್ನು ಸಮರ್ಪಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಸುಮಾರು 206 ಕೋಟಿ ರೂ. ಮೌಲ್ಯದ ಈ ಕೊಡುಗೆ ಉದ್ಯಮ ವಲಯದ ಜತೆಗೆ ಭಕ್ತರ ಗಮನವನ್ನೂ ಸೆಳೆದಿದೆ.