ಹುಬ್ಬಳ್ಳಿ: ಗ್ರಾಹಕರಿಗೆ ಹಾಗೂ ರೈತರಿಗೆ ಸಮರ್ಪಕ, ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಸುವ ಉದ್ದೇಶದಿಂದ ವಿದ್ಯುತ್ ವಿತರಣಾ ವ್ಯವಸ್ಥೆಯ ಪ್ರಮುಖ ಕೊಂಡಿಯಾಗಿರುವ ವಿದ್ಯುತ್ ಪರಿವರ್ತಕಗಳ (ಟ್ರಾನ್ಸ್ಫಾರ್ಮರ್) ನಿರ್ವಹಣೆ ಹಾಗೂ ದುರಸ್ತಿಗೆ ಹೆಸ್ಕಾಂ ವಿಶೇಷ ಆದ್ಯತೆ ನೀಡಿದೆ. ಪರಿವರ್ತಕಗಳು ಹಾಳಾದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ದೀರ್ಘಕಾಲದ ವ್ಯತ್ಯಯ ಉಂಟಾಗದಂತೆ ತ್ವರಿತವಾಗಿ ಬದಲಾಯಿಸಲು ಅಗತ್ಯ ದಾಸ್ತಾನು, ದುರಸ್ತಿ ಕೇಂದ್ರಗಳು ಹಾಗೂ ವಿಶೇಷ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಿದೆ.
ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಪ್ರಸ್ತುತ 3,46,900ಕ್ಕೂ ಅಧಿಕ ವಿದ್ಯುತ್ ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿವರ್ಷ ಸುಮಾರು 20 ಸಾವಿರ ಹೊಸ ಪರಿವರ್ತಕಗಳನ್ನು ವಿದ್ಯುತ್ ವಿತರಣಾ ಜಾಲಕ್ಕೆ ಸೇರ್ಪಡೆಗೊಳಿಸಲಾಗುತ್ತಿದೆ. ಇಷ್ಟೊಂದು ಬೃಹತ್ ಪ್ರಮಾಣದ ಪರಿವರ್ತಕಗಳ ನಿರ್ವಹಣೆ, ದುರಸ್ತಿ ಮತ್ತು ಬದಲಾವಣೆಗೆ ಹೆಸ್ಕಾಂ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ.
30,866 ವಿಫಲ ಟಿ.ಸಿ.ಗಳ ಬದಲಾವಣೆ: 2026-27ನೇ ಸಾಲಿನಲ್ಲಿ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಒಟ್ಟು 30,866 ವಿದ್ಯುತ್ ಪರಿವರ್ತಕಗಳು ವಿಫಲವಾಗಿದ್ದು, ಅವೆಲ್ಲವನ್ನೂ ಬದಲಾಯಿಸಿ ಹೊಸ ಪರಿವರ್ತಕಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಒಟ್ಟು 31,608 ಪರಿವರ್ತಕಗಳನ್ನು ದುರಸ್ತಿಗೊಳಿಸಿ ಮತ್ತೆ ಬಳಕೆಗೆ ಸಿದ್ಧಪಡಿಸಲಾಗಿದೆ. ಇದರಿಂದ ಪರಿವರ್ತಕಗಳ ಲಭ್ಯತೆ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.
26 ಟಿ.ಸಿ. ಬ್ಯಾಂಕ್ಗಳ ಸ್ಥಾಪನೆ: ವಿಫಲಗೊಂಡ ವಿದ್ಯುತ್ ಪರಿವರ್ತಕಗಳನ್ನು (ಟಿ.ಸಿ.) ಯಾವುದೇ ವಿಳಂಬವಿಲ್ಲದೆ ಬದಲಾಯಿಸಿ, ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಖಾತ್ರಿಪಡಿಸುವ ಉದ್ದೇಶದಿಂದ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ವಿವಿಧೆಡೆ ಒಟ್ಟು 26 ಟಿ.ಸಿ. ಬ್ಯಾಂಕ್ಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಹಾಗೂ ಅಗತ್ಯ ಸಾಮರ್ಥ್ಯದ ಟಿ.ಸಿಗಳನ್ನು ಮುಂಚಿತವಾಗಿಯೇ ದಾಸ್ತಾನು ಮಾಡಿಕೊಳ್ಳುವ ಮೂಲಕ ತುರ್ತು ಬದಲಾವಣೆಗೆ ವ್ಯವಸ್ಥಿತ ಕ್ರಮ ಕೈಗೊಳ್ಳಲಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ 750 ಟಿ.ಸಿಗಳನ್ನು ತ್ವರಿತಗತಿಯಲ್ಲಿ ದುರಸ್ತಿಗೊಳಿಸಿ ಮರುಬಳಕೆಗಾಗಿ ದಾಸ್ತಾನಿಗೆ ಸೇರಿಸಲಾಗಿದೆ. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ವಿಫಲಗೊಂಡ ಟಿಸಿಗಳನ್ನು ಕೂಡಲೇ ಬದಲಾಯಿಸಲು ಅನುಕೂಲವಾಗುವಂತೆ ಪ್ರಸ್ತುತ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಒಟ್ಟು 3,100 ಟಿ.ಸಿಗಳನ್ನು ದಾಸ್ತಾನಿನಲ್ಲಿ ಇರಿಸಲಾಗಿದೆ.
ಬೆಳಗಾವಿಯಲ್ಲಿ 931, ಬಾಗಲಕೋಟೆಯಲ್ಲಿ 532, ವಿಜಯಪುರದಲ್ಲಿ 451, ಉತ್ತರ ಕನ್ನಡದಲ್ಲಿ 376, ಹಾವೇರಿಯಲ್ಲಿ 311, ಧಾರವಾಡದಲ್ಲಿ 253 ಹಾಗೂ ಗದಗ ಜಿಲ್ಲೆಯಲ್ಲಿ 202 ಪರಿವರ್ತಕಗಳನ್ನು ಸಿದ್ಧವಾಗಿಡಲಾಗಿದೆ. ಇದರಿಂದ ದೂರು ಬಂದ ತಕ್ಷಣವೇ ಅಗತ್ಯ ಪರಿವರ್ತಕವನ್ನು ಪೂರೈಸಿ ಬದಲಾವಣೆ ಕಾರ್ಯ ಕೈಗೊಳ್ಳಲು ಅನುಕೂಲವಾಗಿದೆ.
60 ದುರಸ್ತಿ ಕೇಂದ್ರಗಳ ಮೂಲಕ ಸೇವೆ: ಟಿ.ಸಿ ಗಳ ದುರಸ್ತಿ, ಗುಣಮಟ್ಟದ ಮರುಸ್ಥಾಪನೆ ಹಾಗೂ ಮರುಬಳಕೆಗೆ ಅನುಕೂಲವಾಗುವಂತೆ ಹೆಸ್ಕಾಂ ವ್ಯಾಪ್ತಿಯ ವಿವಿಧ ತಾಲೂಕುಗಳಲ್ಲಿ 57 ಟಿ.ಸಿ. ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಮೂರು ಬೃಹತ್ ಪರಿವರ್ತಕ ದುರಸ್ತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಎರಡು ಕೇಂದ್ರಗಳು ಹುಬ್ಬಳ್ಳಿಯಲ್ಲಿ ಹಾಗೂ ಒಂದು ಕೇಂದ್ರ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ 60 ದುರಸ್ತಿ ಕೇಂದ್ರಗಳ ಮೂಲಕ ಪರಿವರ್ತಕಗಳ ದುರಸ್ತಿ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಗುತ್ತಿದೆ.
ವಿಫಲವಾದ ಪರಿವರ್ತಕಗಳ ಕುರಿತು ಗ್ರಾಹಕರು ತಕ್ಷಣ ಮಾಹಿತಿ ನೀಡಲು ಅನುಕೂಲವಾಗುವಂತೆ ಹೆಸ್ಕಾಂ ಪ್ರತ್ಯೇಕ ಉಚಿತ ಸಹಾಯವಾಣಿ ಸೇವೆಯನ್ನು ಆರಂಭಿಸಿದೆ. ಪರಿವರ್ತಕ ವೈಫಲ್ಯ ಸಂಭವಿಸಿದ ಸಂದರ್ಭದಲ್ಲಿ ಗ್ರಾಹಕರು 1800-425-4754 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ. ದೂರು ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪರಿವರ್ತಕ ಬದಲಾವಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ.
ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ: ವಿದ್ಯುತ್ ಪರಿವರ್ತಕಗಳ ವೈಫಲ್ಯದಿಂದ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಹೆಸ್ಕಾಂ ವಿಶೇಷ ಗಮನ ಹರಿಸಿದೆ. ರೈತರಿಂದ ದೂರು ಬಂದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿಳಂಬವಿಲ್ಲದೆ ಪರಿವರ್ತಕ ಬದಲಾಯಿಸಲು ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ತ್ವರಿತ ಸ್ಪಂದನೆಗೆ ಆದ್ಯತೆ ನೀಡಲಾಗಿದೆ.
ಪರಿವರ್ತಕಗಳ ಮುನ್ನೆಚ್ಚರಿಕೆ ನಿರ್ವಹಣೆ, ಅಗತ್ಯ ದಾಸ್ತಾನು, ತ್ವರಿತ ದುರಸ್ತಿ ಹಾಗೂ ಬದಲಾವಣೆ ವ್ಯವಸ್ಥೆಯನ್ನು ಸಮನ್ವಯಗೊಳಿಸುವ ಮೂಲಕ ಗ್ರಾಹಕರಿಗೆ ನಿರಂತರ ವಿದ್ಯುತ್ ಸೇವೆ ಒದಗಿಸಲು ಹೆಸ್ಕಾಂ ಕಾರ್ಯಪ್ರವೃತ್ತವಾಗಿದೆ. ವಿದ್ಯುತ್ ಪೂರೈಕೆಯಲ್ಲಿನ ಅಡಚಣೆಗಳನ್ನು ಕಡಿಮೆಗೊಳಿಸಿ, ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುವುದರೊಂದಿಗೆ ಗ್ರಾಹಕ ಸ್ನೇಹಿ ಸೇವೆ ಒದಗಿಸುವುದು ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.




















