ಕೊಪ್ಪಳ: ಬಸವಣ್ಣನವರು ಸೇರಿದಂತೆ ವಿವಿಧ ಮಹಾತ್ಮರ ನಿಂದನೆ ಮಾಡುವವರಿಗೆ ಧರ್ಮದ್ರೋಹಿಗಳು ಎಂಬ ಕಾನೂನನ್ನು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ರಚಿಸಬೇಕು ಎಂದು ಪಂಚಮಸಾಲಿ ಸಮಾಜದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಸವಣ್ಣನವರ ಕುರಿತ ಅವಹೇಳನಕಾರಿ ಬರವಣಿಗೆ ವಿಚಾರವಾಗಿ ಮಾತನಾಡಿದ ಅವರು, ದೇಶದ ವಿರುದ್ಧ ಪುಸ್ತಕ ಬರೆಯುವವರಿಗೆ ಮತ್ತು ಕೃತ್ಯ ಎಸಗುವವರಿಗೆ ದೇಶದ್ರೋಹಿಗಳೆಂದು ಶಿಕ್ಷೆ ವಿಧಿಸಲಾಗುತ್ತದೆ. ಅದೇ ರೀತಿ ಬಸವಣ್ಣನವರು ಸೇರಿ ವಿವಿಧ ಸಮುದಾಯದ ಮಹಾತ್ಮರನ್ನು ನಿಂದಿಸಿ ಪುಸ್ತಕ ಬರೆಯುವವರಿಗೆ ಧರ್ಮದ್ರೋಹಿಗಳೆಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಕಾನೂನು ರಚಿಸಬೇಕು. ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಬಸವಾದಿ ಶರಣರ ಬಗ್ಗೆ ನಿರಂತರವಾಗಿ ಅವಹೇಳನಕಾರಿಯಾಗಿ ಬರೆಯುತ್ತಲೇ ಇದ್ದಾರೆ ಎಂದರು.
ಬಸವಣ್ಣನವರ ವಿರುದ್ಧ ಅವಹೇಳನಕಾರಿ ಪುಸ್ತಕ ಬರೆದವರನ್ನು ಸರ್ಕಾರ ದಿಢೀರ್ ತೀರ್ಮಾನ ತೆಗೆದುಕೊಂಡು ಬಂಧಿಸಿದ್ದಾರೆ. ಇದನ್ನು ಸ್ವಾಗತಿಸುತ್ತೇವೆ ಎಂದರು.


















